

ಮಂಡ್ಯ: ಮಾದಿಗ ಸಮುದಾಯದವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಸವರ್ಣೀಯರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮತ್ತು ಟಿ.ಮಲ್ಲಿಗೆರೆ ಗ್ರಾಮಸ್ಥರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಸವರ್ಣೀಯರು ಗುಂಪು ಕಟ್ಟಿಕೊಂಡು ಪರಿಶಿಷ್ಟ ಜಾತಿಯ ಮನೆಯ ಏಳು ಜನರ ಮೇಲೆ ಮಾರಣಾಂತಿಕವಾಗಿ ಸವರ್ಣೀಯರ ಗುಂಪು ಹಲ್ಲೆ ನಡೆಸಿದೆ. ಜ.8ರಂದು ಕ್ಷುಲ್ಲಕ ಕಾರಣಕ್ಕೆ ಏಕಾಏಕಿ ರಾತ್ರಿ 11 ಗಂಟೆ ಸಮಯದಲ್ಲಿ ಜಗಳ ತೆಗೆದು ಮನಸೋಇಚ್ಚೆ ಒಡೆದು ಗಾಯ ಮಾಡಿರುವುದಲ್ಲದೇ ಅವಾಚ್ಯ ಶಬ್ಧಗಳಿಂದ ಜಾತಿ ನಿಂದನೆ ಮಾಡಿ ಜೀವ ಭಯ ಹುಟ್ಟಿಸಿದ್ದಾರೆ ಎಂದು ಆರೋಪಿಸಿದರು.
30 ಗುಂಪು ಇರುವ ಸವರ್ಣೀಯರು ಬಂದು ಏಳು ಜನರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಇದು ಸಾಲದೆಂಬಂತೆ ಗ್ರಾಮವನ್ನು ತೊರೆಯುವಂತೆಯೂ ಎಚ್ಚರಿಕೆ ನೀಡಿರುವ ಸವರ್ಣೀಯರು ನಿಮ್ಮ ಮನೆಗಳಿಗೆ ಪೆಟ್ರೋಲ್ ಸುರಿದು ಬೆಕಿ ಹಾಕುತ್ತೇವೆ ಎಂಬ ಭಯಹುಟ್ಟಿಸಿದ್ದಾರೆ. ಇವರ ವಿರುದ್ಧ ಇನ್ನೂ ಕ್ರಮ ಏಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಿದ್ದು, ತಕ್ಷಣ ಹಲ್ಲೆ ಮಾಡಿರುವ ಸವರ್ಣೀಯರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಬೇಕಾಗುತ್ತದೆ. ನಮಗೆ ನ್ಯಾಯ ಸಿಗುವವರೆಗೂ ನಿರಂತರ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ಎಚ್.ಎಂ.ಶಿವರಾಜು, ಗಣೇಶ್, ನಂಜುಂಡಮೌರ್ಯ, ಸಂತೋಷ್, ಗ್ರಾಮಸ್ಥರಾದ ಕಣ್ಣಯ್ಯ, ಚಿಕ್ಕರಂಗ, ಸುಲೋಚನಾ, ಮಂಜುಳಾ ಇತರರಿದ್ದರು.