ರೈತರಿಗಾಗಿ ದರ್ಶನ್ ಪುಟ್ಟಣ್ಣಯ್ಯ ಹೋರಾಟ

ರೈತರಿಗಾಗಿ ದರ್ಶನ್ ಪುಟ್ಟಣ್ಣಯ್ಯ ಹೋರಾಟ
Published on

ಪಾಂಡವಪುರ: ಅಮೆರಿಕದಲ್ಲಿ ಒಂದು ಕಂಪನಿ ಇದ್ದು, ಕೈ ತುಂಬಾ ಡಾಲರ್ ಲೆಕ್ಕದಲ್ಲಿ ಹಣ ಸಂಪಾದನೆ ಆಗುತ್ತಿದ್ದರೆ ನಾನು ಇಲ್ಲಿಗೆ ಬಂದು ಶಾಸಕನಾಗುತ್ತಿರಲಿಲ್ಲ. ಆದರೆ, ದರ್ಶನ್ ಪುಟ್ಟಣ್ಣಯ್ಯ ಎಲ್ಲವನ್ನು ತ್ಯಾಗ ಮಾಡಿ ರೈತರಿಗಾಗಿ ಇಲ್ಲಿಗೆ ಬಂದು ಹೋರಾಟ ಮಾಡುತ್ತಿದ್ದಾರೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಕೆ.ಎಸ್.ಪುಟ್ಟಣ್ಣಯ್ಯ ಅವರ 75ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ದರ್ಶನ್ ಪುಟ್ಟಣ್ಣಯ್ಯ ಅವರನ್ನು 9 ವರ್ಷಗಳಿಂದ ಹತ್ತಿರದಿಂದ ನೋಡಿದ್ದು, ಅವರ ಜನಪರ ಕಾಳಜಿ ಇಲ್ಲಿಯವರೆಗೆ ಕರೆತಂದಿದೆ. ರೈತರ ಪರ ಇರುವ ದರ್ಶನ್ ಅವರನ್ನು ಹಾಗೂ ರೈತಸಂಘವನ್ನು ಜನತೆ ಕೈಬಿಡಬಾರದು ಎಂದು ಕರೆ ನೀಡಿದರು.

ದರ್ಶನ್ ಪುಟ್ಟಣ್ಣಯ್ಯ ಒಳ್ಳೇ ಮನಸ್ಸಿನಿಂದ ಕಾಟೇರ ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ್ದರು. ಅವರ ಒಳ್ಳೆಯತನಕ್ಕೆ ಸಿನಿಮಾ ಯಶಸ್ಸು ಕಂಡಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಿರಿಯರ ಹೋರಾಟ ಹಾಗೂ ತ್ಯಾಗದ ಫಲದಿಂದ ರೈತಸಂಘಟನೆ ಉಳಿದುಕೊಂಡು ಬಂದಿದೆ. ಇಂದು ಸಂಘಟನೆ ಹಲವು ಭಾಗಗಳಾಗಿ ಒಡೆದು ಹೋಗಿದೆ. ಈ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಬೇಕು. ನಾವೆಲ್ಲ ಒಗ್ಗಟ್ಟಾಗಿ ಹಿಂದಿನ ಚಳವಳಿಗಳು ಮರುಕಳಿಸುವಂತೆ ಮಾಡಬೇಕಾಗಿದೆ ಎಂದರು.

ರೈತಸಂಘ ಹುಟ್ಟಿದ್ದಾಗ ಇದ್ದ ಸಮಸ್ಯೆಗಳೇ ಬೇರೆಯಾಗಿದ್ದವು, ಈಗಿನ ಸಮಸ್ಯೆಗಳೇ ಬೇರೆಯಾಗಿವೆ. ಪರಿಸ್ಥಿತಿಗೆ ತಕ್ಕಂತೆ ಸಂಘಟನೆ ಹೋರಾಟ ರೂಪಿಸಬೇಕು. ಉಳುವವನೆ ಭೂಮಿಯ ಒಡೆಯ ಕಾಯ್ದೆ ದೇಶದ ದಿಕ್ಕನ್ನೇ ಬದಲಿಸಿತು. ಕಾಟೇರ ಸಿನಿಮಾದಲ್ಲಿ ಈ ಕಾಯ್ದೆಯ ಮಹತ್ವವನ್ನು ಚೆನ್ನಾಗಿ ಚಿತ್ರೀಕರಿಸಲಾಗಿದೆ ಎಂದರು.

ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ನಟ ದರ್ಶನ್ ಕೊಡುಗೆ ಅಪಾರ. ಅವರು ಪ್ರಚಾರ ನಡೆಸಿದ ಸಲುವಾಗಿಯೇ ನನ್ನ ಗೆಲುವು ಸುಲಭವಾಯಿತು ಎಂದು ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net