ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ಕಡಿವಾಣ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಭರವಸೆ

2
Published on

ಮಂಡ್ಯ: ಮೇಲುಕೋಟೆ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವುದರ ಜತೆಗೆ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವುದು ನನ್ನ ಮೊದಲ ಆದ್ಯತೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಕೈಕುಳಿ ಮಾಡುವ ಗಣಿಗಾರಿಕೆಗೆ ನಮ್ಮ ವಿರೋಧವಿಲ್ಲ. ಆದರೆ ದೊಡ್ಡ ಮಟ್ಟದಲ್ಲಿ ಸ್ಫೋಟಕಗಳನ್ನು ಉಪಯೋಗಿಸಿ ಮಾಡುವ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಸ್ಪಷ್ಟಪಡಿಸಿದರು. ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.

ಕ್ಷೇತ್ರದಲ್ಲಿ ಯಾವುದೇ ಗಲಭೆಗಳಿಗೆ ಅವಕಾಶ ನೀಡಬೇಕು. ಎಲ್ಲರೂ ಶಾಂತಿಯುತವಾಗಿ ಬದುಕಬೇಕು. ಬೇಕೆಂದೆ ಗಲಭೆ ಸೃಷ್ಠಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ . ಆರೋಗ್ಯ ಕ್ಷೇತ್ರದ ಸಮಸ್ಯೆ, ಆಸ್ಪತ್ರೆಗಳಲ್ಲಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲಾಗುವುದು. ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗುವಂತೆ ಮಾಡುವುದು. ಒಂದು ಬಾರಿ ಸಾಲ ಮನ್ನಾ ಮಾಡಿದ ನಂತರ ಮತ್ತೇ ಸಾಲ ಮಾಡದಂತೆ ಮಾಡಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಗಮನಹರಿಸಲಾಗುವುದು. ಅಲ್ಲದೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ದೊರಕಿಸಿಕೊಡಲು ಹೋರಾಟ ಮಾಡಲಾಗುವುದೆಂದರು.

ಅನುಭವಿ ರಾಜಕಾರಣಿ ಸಿ.ಎಸ್.ಪುಟ್ಟರಾಜು ಅವರ ವಿರುದ್ಧ ನನ್ನಂತ ಯುವಕ ಗೆಲ್ಲುವುದು ಒಂದು ಸವಾಲಾಗಿತ್ತು. ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಗಲಿರುಳು ದುಡಿದಿದ್ದರಿಂದ ಇದು ಸಾಧ್ಯವಾಗಿತು. ನನ್ನ ಮೇಲೆ ನಂಬಿಕೆಗೆ ಇಟ್ಟು ಗೆಲ್ಲಿಸಿದ ಕ್ಷೇತ್ರದ ಜನತೆಯ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ದಿಗೆ ಶ್ರಮಿಸುತ್ತೇನೆ. ನನ್ನ ಗೆಲುವಿಗೆ ದುಡಿದ ಎಲ್ಲ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆಂದ ಅವರು, ಕ್ಷೇತ್ರದ ಜನತೆ ಪ್ರಚೋದನೆಗೆ ಒಳಗಾಗದೇ ಶಾಂತಿ ಕಾಪಾಡಿಕೊಳ್ಳಬೇಕು. ನಮ್ಮ ರಾಜಕೀಯ ಎದುರಾಳಿಗಳ ಜತೆ ಜಿದ್ದು ಸಾಧಿಸದೇ ಸಂಯಮದಿಂದ ವರ್ತಿಸಬೇಕು. ಆ ಮೂಲಕ ರೈತ ಸಂಘದ ಬಲವರ್ಧನೆಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಲಿಂಗಪ್ಪಾಜಿ, ಬಾಲಚಂದ್ರು, ಪ್ರಸನ್ನ ಎನ್.ಗೌಡ, ಕೆನ್ನಾಳು ನಾಗರಾಜು, ಹರವು ಪ್ರಕಾಶ್, ಶಿವಳ್ಳಿ ಚಂದ್ರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net