

ಮಂಡ್ಯ: ರೈತರೊಂದಿಗೆ ಇರಬೇಕೆನ್ನುವ ಉದ್ದೇಶದಿಂದ ಅಮೆರಿಕದಲ್ಲಿದ್ದ ಕಂಪನಿಯನ್ನು ಮಾರಾಟ ಮಾಡಿ ಶುಕ್ರವಾರ ವಾಪಸಾದ ರೈತ ಸಂಘದ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ನಗರಕ್ಕೆ ಆಗಮಿಸಿದ ದರ್ಶನ್ ಅವರನ್ನು ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹಾಗೂ ಪ್ರಸನ್ನ ಎನ್.ಗೌಡ ನೇತೃತ್ವದಲ್ಲಿ ತೆರೆದ ವಾಹನ ಮೂಲಕ ಕಾರ್ಯಕರ್ತರ ಜಯಘೋಷದ ನಡುವೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಹೂವಿನ ಮಳೆ ಸುರಿಸಲಾಯಿತು. ಬೃಹತ್ ಸೇಬಿನ ಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು. ಬಳಿಕ ಕಾರ್ಯಕರ್ತರೊಂದಿಗೆ ಪಾಂಡವಪುರ ತಾಲೂಕಿಗೆ ತೆರಳಿದರು. ಈ ವೇಳೆ ದಾರಿಯುದ್ದಕ್ಕೂ ಕಾರ್ಯಕರ್ತರು ದರ್ಶನ್ ಅವರಿಗೆ ಸ್ವಾಗತ ನೀಡಿದರು.
ಸರ್ಕಾರದ ವಿರುದ್ಧ ಟೀಕಾಪ್ರಹಾರ: ಇದಕ್ಕೂ ಮುನ್ನ ನಗರದ ಸರ್ ಎಂವಿ ಪ್ರತಿಮೆ ಎದುರು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ದರ್ಶನ್ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯಿಸಿ ರೈತರು ಒಂದೂವರೆ ತಿಂಗಳಿನಿಂದ ಚಳವಳಿ ಮಾಡಲಾಗುತಿದೆ. ಕಾಳಜಿ ಇದ್ದಿದ್ದರೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಿತ್ತು. ರೈತರ ಬಗ್ಗೆ ಯಾವ ರಾಜಕೀಯ ಪಕ್ಷಗಳಿಗೂ ಕಾಳಜಿ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂದು ಟೀಕಿಸಿದರು.
ರೈತ ಚಳವಳಿ ಪ್ರಾರಂಭವಾಗಿ 45 ದಿನಗಳು ಆಗಿವೆ. ಯಾರಾದರೂ ಬಂದು ನಮ್ಮ ಬೇಡಿಕೆಗಳನ್ನು ಕೇಳಿದ್ದಾರಾ, ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರಾ, ಸ್ವಲ್ಪವಾದರೂ ಮಾನ-ಮರ್ಯಾದೆ ಇದ್ದಿದ್ದರೆ ಬಂದು ನಿರ್ಣಯ ಮಾಡಬೇಕಿತ್ತು. ಯಾರು ಏನು ಮಾಡುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ನಾವೆಲ್ಲ ಒಟ್ಟಿಗೆ ಸೇರಿ ರೈತ ಸಂಘವನ್ನು ರಾಜಕೀಯ ಶಕ್ತಿಯನ್ನಾಗಿ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಹೊಸ ನಡೆ-ನುಡಿಯ ರಾಜಕಾರಣಕ್ಕೆ ಮುಂದಾಗಿದ್ದೇವೆ. ಎಲ್ಲ ಪಕ್ಷದವರನ್ನೂ ನೋಡಿದ್ದೀರಿ. ನಾವು ಹೊಸ ಆಲೋಚನೆ ಇಟ್ಟುಕೊಂಡು ರಾಜಕೀಯಕ್ಕೆ ಧುಮುಕಿ ಏನಾದರೂ ಒಳ್ಳೆಯದನ್ನು ಮಾಡಲು ಹೊರಟಿದ್ದೇವೆ. ಎಲ್ಲರೂ ಹುಟ್ಟುತ್ತಾರೆ, ಸಾಯುತ್ತಾರೆ. ಈ ಮಧ್ಯೆ ಏನಾದರೂ ಒಳ್ಳೆಯದನ್ನು ಮಾಡಬೇಕು ಎಂದು ನಮ್ಮ ತಂದೆ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಹೇಳುತ್ತಿದ್ದರು. ಅದರಂತೆ ನಾವು ಒಳ್ಳೆಯದನ್ನು ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಧುಮುಕಿದ್ದೇವೆ. ರೈತ ಸಂಘವನ್ನು ಬೆಳೆಸೋಣ ಎಂದು ಕರೆ ನೀಡಿದರು.
ಪ್ರಮಾಣ ವಚನ ಸ್ವೀಕಾರ: ಮಂಡ್ಯ ಜಿಲ್ಲೆಯ ಸಮಸ್ತ ಜನರ ಆಶಯಗಳಿಗಾಗಿ ರೈತ, ದಲಿತ, ಕಾರ್ಮಿಕ, ಮಹಿಳೆ ಮತ್ತು ವಿದ್ಯಾರ್ಥಿ ಯುವಜನರ ಭರವಸೆಗಳಿಗಾಗಿ ಜಿಲ್ಲೆಯ ಸ್ವಾಭಿಮಾನವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿ ಎತ್ತಿ ಹಿಡಿಯುವುದಕ್ಕಾಗಿ ಹೊಸ ನಡೆ-ನುಡಿಯ ರಾಜಕಾರಣಕ್ಕಾಗಿ ನಾವು ರೈತ ಸಂಘದ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ ಎಂದು ಇದೇ ವೇಳೆ ರೈತ ಮುಖಂಡರು ಪ್ರಮಾಣ ಸ್ವೀಕರಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಎಸ್.ಸಿ. ಮಧುಚಂದನ್, ಪ್ರಸನ್ನ ಎನ್.ಗೌಡ, ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಹರೀಶ್, ಲಿಂಗಪ್ಪಾಜಿ, ರವಿ, ಬೊಮ್ಮೇಗೌಡ, ವಿಜಯಕುಮಾರ್ ಇತರರಿದ್ದರು.