ಕೃಷಿ ಆದಾಯ ತರುವಂತಾಗಲು ಯೋಜನೆ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ

1 (2)
Published on

ಮಂಡ್ಯ: ಕೃಷಿ ಕ್ಷೇತ್ರವನ್ನು ಆದಾಯ ತರುವ ಉದ್ಯಮವನ್ನಾಗಿ ರೂಪಿಸಬೇಕಾಗಿದೆ. ಬೇಸಾಯದಿಂದ ವಿಮುಖರಾಗುತ್ತಿರುವವರನ್ನು ಮತ್ತೆ ಸೆಳೆಯುವ ಅವಶ್ಯಕತೆಯೂ ಇದೆ. ಎಲ್ಲ ಉತ್ಪಗಳಿಗೂ ಒಂದೊಂದು ರೀತಿಯ ಬೆಲೆ ಇದೆ. ಆದರೆ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಬಗ್ಗೆ ಸದನದಲ್ಲಿ ಗಮನ ಸೆಳೆಯಲಾಗುವುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ತಾಲೂಕಿನ ಹೊಳಲು ಗ್ರಾಮದಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ತರಕಾರಿ ಸೇರಿದಂತೆ ವಿವಿಧ ಬೆಳೆಗಳ ದಾಸ್ತಾನು ಮಾಡಲು ಶೀತಲೀಕರಣ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಹಿಳೆಯರಿಗೂ ಉದ್ಯೋಗ ಸೃಷ್ಠಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತೇನೆ. ಎಲ್ಲ ಕಾರ್ಯಗಳಿಗೂ ನನಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎಲ್ಲರ ಸಹಕಾರದಿಂದ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೇನೆ. ಮೇಲುಕೋಟೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಿರ್ಧರಿಸಿದ್ದೇನೆ. ಇದಕ್ಕೆ ನಿಮ್ಮಗಳ ಸಹಕಾರ ನಿರಂತರವಾಗಿ ಇರಲಿ. ಕ್ಷೇತ್ರದ ಯುವಜನರಿಗೆ ಉದ್ಯೋಗ ಕಲ್ಪಿಸುವುದು, ಶಿಕ್ಷಣ, ಆರೋಗ್ಯ ಸೇವೆಗಳನ್ನು ಎಲ್ಲರಿಗೂ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಕ್ಷೇತ್ರದ ಯಾವುದೇ ಗ್ರಾಮಕ್ಕೆ ನಾನು ಸೇರಿದಂತೆ ಮುಖಂಡರು ಭೇಟಿ ಮಾಡಿದಾಗ ಅವರಿಗೆ ಸಮಸ್ಯೆಗಳು, ಅಲ್ಲಿನ ಆಗಿರುವಂತಹ ಕೆಲಸಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಅದು ಬಿಟ್ಟು ದುಂದು ವೆಚ್ಚ ಮಾಡಿ ಹಾರ ತುರಾಯಿಗಳನ್ನು ಹಾಕುವುದು. ಪಟಾಕಿಗಳನ್ನು ಸಿಡಿಸುವುದನ್ನು ಮಾಡಬಾರದು. ಅದೇ ಹಣವನ್ನು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಮುಖಂಡರಾದ ಚಂದನ್, ನಂದೀಶ್, ಜಟ್ಟಿ ಕುಮಾರ್, ನಿಂಗೇಗೌಡ, ಚೇತನ್, ಪಟೇಲ್ ರಾಮು, ಶಿವರಾಜು, ದೀಪಕ್, ಸೂರಿ, ಯಶ್ವಂತ್, ಅಭಿನಂದನ್, ಮನು, ಸಂತೋಷ್, ಚಿಕನ್ ರವಿ, ವೇಣು, ಲಿಂಗರಾಜಮ್ಮ, ಪ್ರೇಮಾ, ಲತಾ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net