

ತಲಕಾವೇರಿ:
ಆಗಾಗ್ಗೆ ಸುರಿಯುತ್ತಿದ್ದ ಮಳೆ, ಬೆಟ್ಟಗಳ ನಡುವಿನಿಂದ ಬೀಸಿ ಬರುತ್ತಿದ್ದ ಚಳಿಗಾಳಿ, ಹಗಲನ್ನೇ ನಾಚಿಸುವಂತಿದ್ದ ಝಗಮಗಿಸುವ ವಿದ್ಯುತ್ ದೀಪಗಳು, ಮೋಡ ಮತ್ತು ಮಂಜಿನ ಕಣ್ಣಾಮುಚ್ಚಾಲೆ, ಜೈ ಜೈ ಮಾತಾ, ಕಾವೇರಿ ಮಾತಾ ಎನ್ನುವ ಕೂಗಿನ ಮಧ್ಯೆ ನಿಗದಿಯಂತೆ ಬುಧವಾರ ನಸುಕಿನ ೧.೨೬ಕ್ಕೆ ಮಾತೆ ಕಾವೇರಿ ಜಲರೂಪಿಣಿಯಾಗಿ ಬ್ರಹ್ಮಕುಂಡಿಕೆಯಲ್ಲಿ ಭಕ್ತರಿಗೆ ದರ್ಶನ ನೀಡಿದಳು. ಕೊಡಗು ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಕಾವೇರಿಯ ಭಕ್ತರು ಈ ಪುಣ್ಯ ಕ್ಷಣಕ್ಕೆ ಸಾಕ್ಷಿಯಾದರು. ಮತ್ತೊಂದು ಕಡೆ ಬುಧವಾರ ಜಿಲ್ಲೆಯಾದ್ಯಂತ ಕಣಿಪೂಜೆ ಸಂಭ್ರಮ ಕಂಡುಬಂತು.
ದಕ್ಷಿಣಕಾಶಿ ಖ್ಯಾತಿಯ ಭಾಗಮಂಡಲ ಮತ್ತು ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇನ್ನು ಇಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆ ನಡೆಯಲಿದೆ. ಶಾಸ್ತ್ರಸಿದ್ಧ ಪಂಚಾಗದಂತೆ ೨೦೨೩ರ ಅಶ್ವಯುಜ ಮಾಸ ೧೭ರ ಮಂಗಳವಾರ ರಾತ್ರಿ ಕರ್ಕಾಟಕ ಲಗ್ನದಲ್ಲಿ (ಕ್ಯಾಲೆಂಡರ್ ಪ್ರಕಾರ ಬುಧವಾರ ಬೆಳಗ್ಗೆ ೧.೨೬) ತೀಥೋದ್ಭವ ಸಂಭವಿಸಿದ ನಂತರ ಕಾವೇರಿ ಜತೆ ಗಂಗೆಯೂ ಸೇರಿಕೊಂಡಿರುತ್ತಾಳೆ ಎನ್ನುವುದು ಆಸ್ತಿಕರ ನಂಬಿಕೆ. ಹಾಗಾಗಿ ತೀರ್ಥೋದ್ಭವ ಕಳೆದ ಮೇಲೆ ಭಾಗಮಂಡಲ ತ್ರಿವೇಣಿ ಸಂಗಮ ಮತ್ತು ತಲಕಾವೇರಿ ಕೊಳದಲ್ಲಿ ಸ್ನಾನ ಮಾಡಿದರೆ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಬರುತ್ತದೆ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬುಧವಾರ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು.
ಭಾಗಮಂಡಲದಲ್ಲಿ ಪಿಂಡ ಪ್ರದಾನ, ಶಾಂತಿಪೂಜೆ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಲಕಾವೇರಿಯಲ್ಲಿ ಮಾತೆ ಕಾವೇರಿಗೆ ಕುಂಕುಮಾರ್ಚನೆ ಸೇರಿದಂತೆ ವಿವಿಧ ಸೇವೆಗಳನ್ನ ಭಕ್ತರು ಮಾಡಿಸುತ್ತಿದ್ದ ದೃಶ್ಯ ಕಂಡುಬಂತು. ಭಾಗಮಂಡಲದಲ್ಲಿ ರಸ್ತೆ ಬದಿಯಲ್ಲಿ ಸಿಹಿತಿನಿಸು, ಬಳೆ, ಮಕ್ಕಳ ಆಟಿಕೆಗಳ ಅಂಗಡಿಗಳು ತಲೆಯೆತ್ತಿದ್ದು, ಜಾತ್ರೆಗೆ ಕಳೆ ನೀಡಿದೆ.
ಇದಕ್ಕೂ ಮೊದಲು ಬುಧವಾರ ನಸುಕಿನಲ್ಲಿ ತೀರ್ಥೋದ್ಭವಕ್ಕೂ ಮುನ್ನ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಅರ್ಚಕರು ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿಗೆ ವಿಶೇಷ ಪೂಜೆಗಳನ್ನು ನೆರವೇರಿಸಿದರು. ನಂತ ವೇದಘೋಷಗಳು ಮುಂದುವರಿದು ತೀಥೋದ್ಭವದ ಕ್ಷಣಗಳು ಹತ್ತಿರ ಬರುತ್ತಿದ್ದಂತೆಯೇ ಭಕ್ತರ ಘೋಷಣೆಗಳು ಮುಗಿಲುಮುಟ್ಟಿದವು. ಜೈ ಜೈ ಮಾತಾ, ಕಾವೇರಿ ಮಾತಾ ಕಾವೇರಮ್ಮನ ಪಾದಗಳಿಗೆ ಗೋವಿಂದ ಎಂದು ಕೂಗುತ್ತಾ ಭಕ್ತರು ಭಾವಪರವಶರಾದರು. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಶ್ರೀ ಭಗಂಡೇಶ್ವರ ದೇವಾಲಯಕ್ಕೆ ತೀರ್ಥ ಕೊಂಡೊಯ್ಯಲು ಭಾಗಮಂಡಲದಿಂದ ತಕ್ಕ ಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ ನೇತೃತ್ವದಲ್ಲಿ ಅರ್ಚಕರು ಮತ್ತು ದೇವಾಲಯದ ಮುಖ್ಯಸ್ಥರು ಆಗಮಿಸಿದರು.
ಬುಧವಾರ ನಸುಕಿನ ೧.೨೬ರ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ಸಂಭವಿಸುತ್ತಿದ್ದಂತೆಯೇ ಅರ್ಚಕರು ಬ್ರಹ್ಮಕುಂಡಿಕೆಯಿಂದ ತೀರ್ಥವನ್ನು ತೆಗೆದು ಭಕ್ತರಿಗೆ ಪ್ರೋಕ್ಷಣೆ ಮಾಡಿದರು. ತೀರ್ಥ ಕೊಂಡೊಯ್ಯಲು ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ದೊಡ್ಡ ದೊಡ್ಡ ಕೊಡಗಳೊಂದಿಗೆ ಕೊಳಕ್ಕೆ ಧುಮುಕಿ ಪವಿತ್ರ ತೀರ್ಥ ಸಂಗ್ರಹಿಸಲು ಮುಗಿಬಿದ್ದ ದೃಶ್ಯ ಕಂಡುಬಂತು. ಈ ಬಾರಿ ಪ್ಲಾಸ್ಟಿಕ್ ಉತ್ಪನ್ನಗಳಲ್ಲಿ ತೀರ್ಥ ಸಂಗ್ರಹಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪ್ಲಾಸಿಕ್ ಕೊಡಗಳು ಅಷ್ಟಾಗಿ ಕಂಡುಬರಲಿಲ್ಲ. ತಲಕಾವೇರಿ ದೇವಾಲಯದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.