ಹೊಸ ವರ್ಷಾರಂಭದಲ್ಲಿ ಕರ್ನಾಟಕ ದರ್ಶನ

tour
Published on

ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಸಿದ್ಧತೆ

ಮೈಸೂರಿನತ್ತ ಗ್ರಾಮಾಂತರ ಜಿಲ್ಲೆಯ ಚಿತ್ತ?


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿ ವರ್ಷ ಶಾಲಾ ಮಕ್ಕಳಿಗಾಗಿ ಸರ್ಕಾರ ಏರ್ಪಡಿಸುವ ಕರ್ನಾಟಕ ದರ್ಶನ ಶೈಕ್ಷಣಿಕ ಅಧ್ಯಯನ ಪ್ರವಾಸವನ್ನು ಜನವರಿಯ ಮೊದಲ ವಾರದಲ್ಲಿ ಆಯೋಜಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸಿದೆ.
8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕ ದರ್ಶನ ಪ್ರವಾಸ ಹಮ್ಮಿಕೊಳ್ಳಲಾಗುತ್ತಿತ್ತು.
ಆದರೆ ಈ ಬಾರಿ ಅನುದಾನ ಬಿಡುಗಡೆ ವಿಳಂಬ ಸೇರಿ ಇನ್ನಿತರ ಕೆಲವು ಕಾರಣಗಳಿಂದ ಪ್ರವಾಸದ ದಿನಾಂಕ ನಿಗದಿಯಾಗಿಲ್ಲ. ಡಿಸೆಂಬರ್ ತಿಂಗಳೊಳಗೆ ಮಕ್ಕಳ ಪ್ರವಾಸ ಮುಗಿಸಬೇಕೆಂದು ಸರ್ಕಾರ ಸುತ್ತೋಲೆಯಲ್ಲಿ ಸೂಚಿಸಿದೆ. ಆದರೆ ಮಕ್ಕಳ ಪಟ್ಟಿ ಪರಿಶೀಲನೆ, ಅನುದಾನ ಬಳಕೆ ಸೇರಿ ಇನ್ನಿತರ ಕಾರಣಗಳಿಂದಾಗಿ ಡಿಸೆಂಬರ್‌ನಲ್ಲಿ ಪ್ರವಾಸ ಆಯೋಜನೆ ಕಷ್ಟಸಾಧ್ಯ ಎನ್ನಲಾಗಿದ್ದು, ಜನವರಿ ಮೊದಲ ವಾರದಲ್ಲಿ ಪ್ರವಾಸ ಮುಗಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಶಿಕ್ಷಣ ಇಲಾಖೆಯಿಂದ ಪಟ್ಟಿ: ಮೊದಲಿಗೆ 2023-24ನೇ ಸಾಲಿನ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಪ್ರವಾಸಕ್ಕೆ ಅನುಮೋದನೆ ಸಿಕ್ಕಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಪರಿಶಿಷ್ಟ ಜಾತಿಯ 68 ಹಾಗೂ ಪಂಗಡದ 45 ಸೇರಿ 113 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಇದರ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ರವಾನೆಯಾಗಿದೆ.
2ನೇ ಹಂತದ ಪಟ್ಟಿಯೂ ಸಿದ್ಧ: ಸರ್ಕಾರ ಕೆಲ ಸಮುದಾಯದ ಮಕ್ಕಳಿಗೆ ಮಾತ್ರ ಪ್ರವಾಸ ಕಾರ್ಯಕ್ರಮ ರೂಪಿಸಿರುವುದಕ್ಕೆ 2019ರಲ್ಲಿ ವಿರೋಧ ವ್ಯಕ್ತವಾಗಿತ್ತು. ಬಳಿಕ ಎಚ್ಚೆತ್ತುಕೊಂಡಿದ್ದ ಸರ್ಕಾರ ಎಲ್ಲ ಸಮುದಾಯದ ಮಕ್ಕಳಿಗೂ ಕರ್ನಾಟಕ ದರ್ಶನ ಪ್ರವಾಸ ವಿಸ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಇನ್ನಿತರ ಸಮುದಾಯದ ಮಕ್ಕಳ ಪಟ್ಟಿಯನ್ನು ಸಿದ್ಧಪಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ವರದಿ ಸಲ್ಲಿಸಿದೆ.
ಬಿಇಒಗಳ ಉಸ್ತುವಾರಿ: ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರವಾಸ ಆಯೋಜನೆಗೊಳ್ಳುವ ಹಿನ್ನೆಲೆಯಲ್ಲಿ ಆಯಾ ತಾಲೂಕುಗಳ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯಾ ತಾಲೂಕುಗಳ ಉಸ್ತುವಾರಿ ವಹಿಸಲಿದ್ದಾರೆ. ಮಕ್ಕಳನ್ನು ಎಲ್ಲಿಗೆ ಕರೆತರಬೇಕು, ಪ್ರವಾಸಕ್ಕೆ ಹೊರಡುವ ವಾಹನದ ಪರಿಶೀಲನೆ ಸೇರಿ ಇನ್ನಿತರ ಜವಾಬ್ದಾರಿ ಹೊರಲಿದ್ದಾರೆ. ಹಾಗೆಯೇ ಆಯಾ ತಾಲೂಕಿನಿಂದ ಓರ್ವ ಶಿಕ್ಷಕರನ್ನು ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಪ್ರವಾಸಕ್ಕೆ ನಿಯೋಜಿಸುವ ಸಂಬಂಧ ಶಿಕ್ಷಕರನ್ನೂ ಆಯ್ಕೆ ಮಾಡಲಾಗಿದೆ.
ಮೈಸೂರಿನತ್ತ ಚಿತ್ತ?
ಈ ಬಾರಿ ಮೈಸೂರು ಭಾಗದತ್ತ ಗ್ರಾಮಾಂತರ ಜಿಲ್ಲೆಯ ಮಕ್ಕಳನ್ನು ಕರೆದೊಯ್ಯಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಶೈಕ್ಷಣಿಕ ಅಧ್ಯಯನ ದೃಷ್ಟಿಯಲ್ಲಿ ಮೈಸೂರು ಪ್ರಮುಖವಾಗಿದ್ದು, ಮಕ್ಕಳಿಂದಲೂ ಮೈಸೂರು ವೀಕ್ಷಣೆಗೆ ಹೆಚ್ಚು ಉತ್ಸುಕತೆ ವ್ಯಕ್ತವಾಗಿದೆ ಎನ್ನಲಾಗಿದೆ.
ಆಯ್ಕೆಗೆ ಮಾನದಂಡ: ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ, ಕ್ರಿಡಾ ಕೂಟದಲ್ಲಿ ವಿಜೇತರಾದವರಿಗೆ ಅವಕಾಶ ನೀಡಬೇಕು. 7ನೇ ತರಗತಿಯಲ್ಲಿ ಎ+, ಎ ಗ್ರೇಡ್ ಪಡೆದವರನ್ನು ಆಯ್ಕೆ ಪಟ್ಟಿಯಲ್ಲಿ ಪರಿಗಣಿಸಬೇಕು. ಮುರಾರ್ಜಿ ದೇಸಾಯಿ ವಸತಿ ಶಾಲೆ ಓದುತ್ತಿರುವ ಎಸ್‌ಸಿ, ಎಸ್‌ಟಿ ಮಕ್ಕಳನ್ನೂ ಸೇರಿಸಿ ಪಟ್ಟಿ ತಯಾರಿಸಬೇಕು ಸೇರಿ ಇನ್ನಿತರ ಮಾನದಂಡಗಳ ಮೇಲೆ ಮಕ್ಕಳ ಆಯ್ಕೆ ಮಾಡಲಾಗಿದೆ.


ಪ್ರಸಕ್ತ ಸಾಲಿನ ಕರ್ನಾಟಕ ದರ್ಶನ ಮಕ್ಕಳ ಶೈಕ್ಷಣಿಕ ಪ್ರವಾಸ ಆಯೋಜನೆ ಸಂಬಂಧ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮಕ್ಕಳ ಪಟ್ಟಿ ಕೇಳಿತ್ತು. ಅದರಂತೆ ಜಿಲ್ಲೆಯ ನಾಲ್ಕೂ ತಾಲೂಕುಗಳಿಂದ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಕ್ಕಳ ಪಟ್ಟಿ ಸಿದ್ದಪಡಿಸಿ ಇಲಾಖೆಗೆ ತಲುಪಿಸಲಾಗಿದೆ. ಪ್ರವಾಸಕ್ಕೆ ಶಿಕ್ಷಣ ಇಲಾಖೆಯಿಂದ ಬೇಕಾದ ಎಲ್ಲ ಸಹಕಾರ ದೊರೆಯಲಿದೆ.
ಕೃಷ್ಣಮೂರ್ತಿ
ಉಪನಿರ್ದೇಶಕ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net