

ಹೊಸದುರ್ಗ: ಸತ್ ಚಿಂತನೆ, ಸತ್ ಕಾರ್ಯಗಳ ಮೂಲಕ ಭಗವಂತ ನೀಡಿರುವ ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಮಾರುತಿ ಪೀಠದ ಶ್ರೀ ವಿಜಯ ಮಾರುತಿ ಶರ್ಮ ಸ್ವಾಮೀಜಿ ಹೇಳಿದರು.
ತಾಲೂಕಿನ ಬೆಲಗೂರು ಗ್ರಾಮದ ಮಾರುತಿ ಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಮ್ಮ 20ನೇ ವರ್ಷದ ವರ್ಧಂತಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಗವಂತ ನೀಡಿರುವ ಜನ್ಮವನ್ನು ಭಗವಂತನ ಸೇವೆ ಮಾಡುವ ಮೂಲಕ ಅವನಿಗೆ ಸಮರ್ಪಿಸಬೇಕು. ಇಲ್ಲಿ ನಾವು ನಿಮಿತ್ತ ಮಾತ್ರ ಎಲ್ಲವೂ ಪರಮಾತ್ಮನ ನಿಶ್ಚಯದಂತೆ ನಡೆಯುತ್ತದೆ. ನಿರ್ಮಲವಾದ ಭಕ್ತಿ, ಶ್ರದ್ದೆಯಿಂದ ಪ್ರಾರ್ಥಿಸಿದರೆ ಭಗವಂತನ ಸಾನ್ನಿಧ್ಯ ದೊರೆಯುತ್ತದೆ. ಬದುಕಿನಲ್ಲಿ ಪರಾಮಾರ್ಥಿಕ ಚಿಂತನೆ, ಸುಜ್ಞಾನದ ಮೂಲಕ ಭಗವಂತನನ್ನು ಕಾಣುವ ಕೆಲಸ ಮಾಡಬೇಕು ಎಂದರು.
ಅವಧೂತ ಸದ್ಗುರು ಶ್ರೀ ಬಿಂಧು ಮಾಧವ ಶರ್ಮ ಸ್ವಾಮೀಜಿ ಅವರ ಸಂಕಲ್ಪದಂತೆ ಶ್ರೀ ವೀರಪ್ರತಾಪ ಅಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಸತ್ಕಾರ್ಯಗಳು ನಡೆಯುತ್ತಿವೆ. ಪೂಜ್ಯರ ಮಾರ್ಗದರ್ಶನದಂತೆ ಭಕ್ತರಿಗೆ ಅಭಯ ನೀಡುವ ಕೆಲಸ ಕ್ಷೇತ್ರದಲ್ಲಿ ನಡೆಯುತ್ತಿದೆ. ಹೋಮ, ಹವನ, ಪಾರಾಯಣ ಹಾಗೂ ವೇದ ಪಠಣದಂತಹ ಧರ್ಮ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಭಕ್ತರ ಸಹಕಾರದಿಂದ ಎಲ್ಲವೂ ಸಾಧ್ಯವಾಗಿದೆ ಎಂದು ಹೇಳಿದರು.
ನಾವು ಕೂಡ ಗುರುಗಳ ಹಾದಿಯಲ್ಲಿಯೇ ನಡೆಯುವ ಮೂಲಕ ಕ್ಷೇತ್ರ ಅಭಿವೃದ್ಧಿ ಹಾಗೂ ಭಕ್ತರ ಹಿತ ಕಾಯುವ ಕೆಲಸ ಮಾಡುತ್ತಿದ್ದೆವೆ. ಭಕ್ತರ ಮೂಲಕವೇ ಭಗವಂತನನ್ನು ಕಾಣುವ ಪ್ರಯತ್ನ ನಮ್ಮದು ಎಂದು ತಿಳಿಸಿದರು.
ಉದ್ಯಮಿ ಕೆ.ಎಸ್.ನಾಗರಾಜ್, ಕೆ.ಎಸ್.ಪ್ರಸನ್ನ ಕುಮಾರ, ಮಂಜುನಾಥ ಶೀಲವಂತ, ರವಿಕುಮಾರ, ಚಂದ್ರಮೌಳಿ, ಜಗದೀಶ್, ಇತರರಿದ್ದರು.
ವಿಶೇಷ ಹೋಮ ಮತ್ತಿತರ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿತ್ತು. ಆಂಜನೇಯ ಸ್ವಾಮಿಗೆ ಮಹಾಭಿಷೇಕ, ಚಂಡಿಕಾ, ರುದ್ರ, ಮೃತ್ಯುಂಜಯ ಹೋಮ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು. ನಂತರ ಭಕ್ತರಿಂದ ಪಾದಪೂಜೆ ಸೇವೆ ನಡೆಯಿತು.ನೆರವೆರಿತು.