

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ರೇಣುಕಸ್ವಾಮಿ ಎನ್ನುವ ವ್ಯಕ್ತಿಯೊರ್ವ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂದು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲಿದೆ. ಸದ್ಯ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಅವರ ಸಹಚರರು ಇದ್ದಾರೆ. ಈ ಸುದ್ದಿ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಎಲ್ಲಾ ಮೀಡಿಯಾ ಎದುರು ಬಂದು ದರ್ಶನ್ ಕುರಿತಾಗಿ ಅವರ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಉಮಾಪತಿ ಅವರ ವಿರುದ್ಧವಾಗಿ ದರ್ಶನ್ ಅಭಿಮಾನಿಗಳು ಗರಂ ಆಗಿದ್ದಾರೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಬೆನ್ನಲ್ಲೇ ಈ ಪೋಸ್ಟ್ನ್ನು ಡಿಲೀಟ್ ಮಾಡಲಾಗಿದೆ. ಕಾನೂನಿನ ಭಯಕ್ಕೆ ಹೆದರಿ ಈ ಪೋಸ್ಟ್ ತೆಗೆದು ಹಾಕಲಾಗಿದ್ಯಾ? ಎನ್ನುವ ಪ್ರಶ್ನೆ ಮುನ್ನೆಲೆಗೆ ಬಂದಿದೆ.
ತೂಗುದೀಪ ಡಿ ಟೀಮ್-ಆರ್ ಈ ರೀತಿ ಪೋಸ್ಟ್ ಮಾಡಿದೆ ʻʻಉಮಾಪತಿ ಅವರೇ ನೀವು ಆಡಿರುವ ಮಾತುಗಳಿಗೆ ಡಿ ಬಾಸ್ ರವರು ಹೊರ ಬಂದಮೇಲೆ ಉತ್ತರ ಸಿಗುವ ರೀತಿಯಲ್ಲೇ ಸಿಗುತ್ತೆ.. ಅದು ಆಗಿರಲಿ ಬಿಡಿ! 2021 ಫೆಬ್ರವರಿ 15 ಮಡಿಕೇರಿಯಲ್ಲಿ ರಾತ್ರಿ ಸರಿ ಸುಮಾರು 10 ರಿಂದ 11ರ ಸಮಯ, ರಾಬರ್ಟ್ ಚಿತ್ರದ ಟ್ರೈಲರ್ ಅನ್ನು ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗಾಗಿ ಮುಂಚಿತವಾಗಿ ಡಿ ಬಾಸ್ ರವರು ಬಿಡುಗಡೆಯನ್ನು ನಿಮ್ಮ ಕೈನಿಂದಲೇ ಮಾಡಿಸ್ತಾರೆ, ಅದು ಕೂಡ ದೊಡ್ಡ ಪರದೆ ಮೇಲೆ… ಮಾಡುವ ಮುನ್ನ ನಮ್ಮ ನಿರ್ಮಾಪಕರ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು, ಟ್ರೈಲರ್ ಬಿಡುಗಡೆ ಮಾಡಲು ಒಂದು ಷರತ್ತು ಹಾಕುತ್ತಾರೆ, ಆ ಷರತ್ತು ಏನು ಅಂತ ನಿಮಗೆ ಮರೆತು ಹೋಗಿರಬಹುದು.
ಆದರೆ ನಾವು ಆ ಷರತ್ತು ಮರೆತಿಲ್ಲ, ಟ್ರೈಲರ್ ಬಿಡುಗಡೆ ಮಾಡ್ಬೇಕು ಅಂದ್ರೆ ನಮ್ಮ ನಿರ್ಮಾಪಕರ ಕೈಗೆ ನಿಮ್ಮ ಕೈಲಿ ಎಷ್ಟು ಹಣ ಕೊಡೋಕೆ ಆಗುತ್ತೋ ಅಷ್ಟು ಕೊಡಿ ಅಂದಾಗ ಕೇವಲ 45 ನಿಮಿಷಗಳ ಒಳಗೆ ಬರೋಬ್ಬರಿ 2 ಲಕ್ಷ ರೂ. ಸಂಗ್ರಹಣೆ ಆದಂತ ಹಣ ಕೊಟ್ಟೆವು. ಅದಕ್ಕೆ ಇನ್ನು ಸ್ವಲ್ಪ ತನ್ನ ಕೈನಿಂದ ಕೊಟ್ಟು ಹಣದಲ್ಲಿ, ತುಮಕೂರು ಸಿದ್ದಗಂಗಾ ಮಠಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಲಾಯ್ತು. ಅದು ಕೂಡ ನಿಮ್ಮ ಕೈನಿಂದಲೇ ಶಿರಾ ಅಭಿಮಾನಿ ಸಂಘದವರಿಗೆ ಕೊಡಿಸಿದ್ದು ಮರೆತು ಹೋಯಿತಾ ಸಾರ್. ಚೆನ್ನಾಗಿದ್ದಾಗ ಜತೆಯಲ್ಲಿ ಚನ್ನಾಗಿ ತಿಂದು ತೇಗಿ, ಈಗ ಆ ಮನುಷ್ಯನ ಮೇಲೆ ವಿಷ ಕಕ್ಕುವ ನಿಮಗೆ ನರಸಿಂಹ ಒಳ್ಳೆಯದು ಮಾಡಲಿʼʼಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ, ಉಮಾಪತಿ ಅವರು ಕಾಟೇರ ಟೈಟಲ್ ನಾನೇ ಕೊಟ್ಟಿದ್ದು ಎಂದು ಹಲವಾರು ಸಂದರ್ಶನಗಳಲ್ಲಿ ಹೇಳಿದ್ದರು. ದರ್ಶನ್ ಈ ಬಗ್ಗೆ ಮಾತನಾಡಿ ʻʻತಗಡೇ, ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?ʼʼ ಎಂದು ವೇದಿಕೆ ಮೇಲೆಯೇ ಉಮಾಪತಿಗೆ ಪ್ರಶ್ನೆ ಮಾಡಿದ್ದರು. ʻಈ ಕಥೆ ನಾನು ಮಾಡಿಸಿದೆ, ಕಥೆ ನಾನು ಕೊಟ್ಟೆ ಎಂದು ಎಂದು ಹೇಳಿಕೊಂಡು ಬಂದಿದ್ದೆಯಲ್ವಾ?ಇಂಥ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು. ಅಯ್ಯೋ ತಗಡೇ… ಎಲ್ಲ ಆಧಾರ ಇಟ್ಟುಕೊಂಡೇ ಮಾತನಾಡಬೇಕುʼʼ ಎಂದು ಉಮಾಪತಿಗೆ ನೇರವಾಗಿ ದರ್ಶನ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ನಟ ದರ್ಶನ್ ಬಳಸಿದ ಪದ ಬಳಕೆ ಬಗ್ಗೆ ಬಳಿಕ ಉಮಾಪತಿ ಮಾತನಾಡಿ ʻʻಅದು ತಪ್ಪು ಸರ್, ಸಮಸ್ಯೆಗಳು ಎಲ್ಲ ಕಡೆ ಬರುತ್ತದೆ. ಆದರೆ ಅದನ್ನು ಹ್ಯಾಂಡಲ್ ಮಾಡುವ ರೀತಿ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ದೇಹ ತೂಕ ವಿದ್ದರೆ ಸಾಲದು ಮಾತು ತೂಕವಿರಬೇಕು. ನಾನು ತಪ್ಪು ಮಾಡಿದರೂ ತಪ್ಪೆ. ಬೇರೆ ಯಾರಾದರೂ ತಪ್ಪು ಮಾಡಿದರೆ ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಮೆಸೆಜ್ ಕೊಡಬೇಕು. ಈ ವಿವಾದಿಂದ ಸಂದೇಶ ಕೊಡುವಂತದ್ದು ಏನಿಲ್ಲʼʼಎಂದಿದ್ದರು.
ರಾಬರ್ಟ್ ಸಿನಿಮಾ ಬಳಿಕ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ನಡುವೆ ಘರ್ಷಣೆ ಉಂಟಾಗಿತ್ತು. ದರ್ಶನ್ ಮಾಧ್ಯಮ ಮುಂದೆ ಪ್ರತಿಕ್ರಿಯಿಸುವಾಗ ಉಮಾಪತಿ ಗೌಡಗೆ ತಗಡು ಎಂದು ಹೇಳಿದ್ದರು. ಅದಕ್ಕೆ ಉಮಾಪತಿ ಗೌಡ ಇಂದು ತಗಡಾಗಿರುವವನು ಮುಂದೊಂದು ದಿನ ಚಿನ್ನದ ತಗಡಾಗಬಹುದು ಎಂದು ಪ್ರತ್ಯುತ್ತರ ನೀಡಿದ್ದರು. ಇದೀಗ ರೇಣುಕಸ್ವಾಮಿ ಪ್ರಕರಣದ ಬೆನ್ನಲ್ಲೇ ನಿರ್ಮಾಪಕ ಉಮಾಪತಿ ಗೌಡರವರು ದರ್ಶನ್ಗೆ ಟಾಂಗ್ ಕೊಟ್ಟಿದ್ದಾರೆ. ಈ ಕುರಿತಾಗಿ ದರ್ಶನ್ ಅವರ ಅಭಿಮಾನಿಗಳು ಉಮಾಪತಿ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕವಾಗಿ ಬೆದರಿಕೆ ಹಾಕಿದ್ದಾರೆ ಎನ್ನುವ ಪೋಸ್ಟ್ವೊಂದು ವೈರಲ್ ಆಗಿದೆ.