ದರ್ಶನ್, ಸಹಚರರಿಗೆ ಕಠಿಣ ಶಿಕ್ಷೆಯಾಗಲಿ

RemasterDirector_1a5c03258
ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರ ಗುರುವಾರ ಪಿರಿಯಾಪಟ್ಟಣದಲ್ಲಿ ಉಪತಹಸೀಲ್ದಾರ್ ವಿನೋದ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಪಿ.ಚಂದ್ರಶೇಖರಯ್ಯ, ಪಿ.ಮಹದೇವ್, ನಾರಾಯಣ್, ಗಿರೀಶ್, ಜೆ.ಮೋಹನ್, ಮಂಜು, ಮುರುಳಿ, ನಿರಂಜನ್ ಇದ್ದರು.
Published on

ಪಿರಿಯಾಪಟ್ಟಣ: ಮಾರಣಾಂತಿಕ ಹಲ್ಲೆ ನಡೆಸಿ ಅಮಾಯಕ ವ್ಯಕ್ತಿಯ ಸಾವಿಗೆ ಕಾರಣರಾಗಿರುವ ಚಿತ್ರ ನಟ ದರ್ಶನ್ ಮತ್ತು ಆತನ ಸಹಚರರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಗುರುವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೆ.ಪಿ.ಚಂದ್ರಶೇಖರಯ್ಯ ಮಾತನಾಡಿ, ಅಮಾಯಕ ಯುವಕನನ್ನು ನಟ ದರ್ಶನ್ ಮತ್ತು ಆತನ ಸಹಚರರು ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಆತನಿಗೆ ಶಿಕ್ಷೆ ವಿಧಿಸಲು ಕಾನೂನು ಮತ್ತು ಪೊಲೀಸ್ ಇಲಾಖೆ ಇದೆ. ಆದರೆ ಅಮಾಯಕ ವ್ಯಕ್ತಿಯನ್ನು ಅಪಹರಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸುವ ಮೂಲಕ ಆತನ ಸಾವಿಗೆ ಕಾರಣಕರ್ತರಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸಿದರು.

ನಟ ದರ್ಶನ್ ಅವರನ್ನು ಚಿತ್ರರಂಗದಿಂದಲೇ ಬ್ಯಾನ್ ಮಾಡಬೇಕು. ಅಲ್ಲದೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡದೆ ನೊಂದ ರೇಣುಕಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ದಸಂಸ ಮುಖಂಡ ಪಿ.ಮಹದೇವ್ ಮಾತನಾಡಿ, ರೇಣುಕಸ್ವಾಮಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾಗೌಡ ಮತ್ತು ಆತನ ಸಹಚರರಿಗೆ ಯಾವುದೇ ರೀತಿಯ ಕನಿಕರ ತೋರಿಸದೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಪ್ರಕರಣದಿಂದ ಕನ್ನಡ ಚಿತ್ರರಂಗದ ಮಾನ ಹರಾಜಾಗಿದ್ದು, ಚಿತ್ರರಂಗವೇ ತಲೆತಗ್ಗಿಸುವಂತಾಗಿದೆ. ಗರ್ಭಿಣಿಯಾಗಿರುವ ರೇಣುಕಸ್ವಾಮಿ ಪತ್ನಿಗೆ ಸರ್ಕಾರ ಸೂಕ್ತ ನೆರವು ಕಲ್ಪಿಸುವ ಮೂಲಕ ನ್ಯಾಯ ಒದಗಿಸಬೇಕಿದೆ ಎಂದರು.

ಮುಖಂಡರಾದ ನಾರಾಯಣ್, ಗಿರೀಶ್ ದುಷ್ಕೃತ್ಯವನ್ನು ಖಂಡಿಸಿದರು. ಬಳಿಕ ಪ್ರತಿಭಟನಾಕಾರರು ಉಪತಹಸೀಲ್ದಾರ್ ವಿನೋದ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳಾದ ಜೆ.ಮೋಹನ್, ಮಂಜು, ಮುರುಳಿ, ಪುರಸಭೆ ಸದಸ್ಯ ನಿರಂಜನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net