

ಮಂಡ್ಯ: ದೀಪಾವಳಿ ಹಬ್ಬದ ಬಳಿಕ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿಯೂ ವಾಸ್ತವ್ಯ ಹೂಡಲಾಗುವುದು ಎಂದು ಮನ್‌ಮುಲ್ ಹಾಗೂ ಶಂಭು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಹೇಳಿದರು.
ತಾಲೂಕಿನ ಬಸರಾಳು ಗ್ರಾಮದ ಕಾಲಭೈರವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಶಂಭು ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಂಭು ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದ ಜನರು ನನ್ನನ್ನು ಪ್ರೀತಿಯಿಂದ ಬೆಳೆಸಿ ಹಾರೈಸಿದ್ದೀರಿ. ಈ ಹಿನ್ನೆಲೆಯಲ್ಲಿ ಅದರ ಋಣ ತೀರಿಸುವ ನಿಟ್ಟಿನಲ್ಲಿ ಟ್ರಸ್ಟ್ ಮೂಲಕ ಸೇವೆ ಮಾಡುತ್ತಿದ್ದೇನೆ. ಅಂತೆಯೆ, ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿ ಅಲ್ಲಿನ ಜನರ ಕಷ್ಟಸುಖವನ್ನು ತಿಳಿದುಕೊಳ್ಳಲು ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಸೇವಕನಾಗಿ ಕೆಲಸ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಿ ಎಂದು ಕೋರಿದರು.
ಶಂಭು ಸೇವಾ ಟ್ರಸ್ಟ್ ವತಿಯಿಂದ ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯುತ್ತಿದೆ. ಅಂತೆಯೆ, ಶಂಭು ಧರ್ಮಯಾತ್ರೆ ನಿರಂತರವಾಗಿ ನಡೆಯಲಿದ್ದು, ಈವರೆಗೆ 96 ಬಸ್‌ಗಳಲ್ಲಿ ಸುಮಾರು 5,300 ಯಾತ್ರಾರ್ಥಿಗಳು ಧರ್ಮಯಾತ್ರೆ ಮುಗಿಸಿದ್ದಾರೆ. ಮುಂದಿನ ದಿನಗಳಲ್ಲಿ 15 ಸಾವಿರ ಜನರಿಗೆ ಧರ್ಮಯಾತ್ರೆ ಕಾರ್ಯಕ್ರಮ ರೂಪಿಸಲಾಗುವುದು. ಯಾತ್ರಾರ್ಥಿಗಳಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಿ ಸೌತಡ್ಕ ಗಣಪತಿ, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಮಾಡಿಸಿ ವಾಪಸ್ ಕರೆತರಲಾಗುವುದು ಎಂದು ವಿವರಿಸಿದರು.
ಮುಖಂಡರಾದ ಕೆಂಚನಹಳ್ಳಿ ಪುಟ್ಟಸ್ವಾಮಿ, ಪ್ರತಾಪ್, ಬಿ.ಆರ್.ಸುರೇಶ್, ಹೇಮಂತ್, ಕುಮಾರ್, ಶ್ರೇಯಸ್ ಇತರರಿದ್ದರು.
ಇದೇ ವೇಳೆ ಬಿಳಿದೇಗಲು ಗ್ರಾಮದಿಂದ 3, ಕೆ.ಗೌಡಗೆರೆ ಮತ್ತು ಮರೀಗೌಡ ಬಡಾವಣೆಯಿಂದ ತಲಾ 2, ದೊಡ್ಡಗರುಡನಹಳ್ಳಿ, ಹಂಚಹಳ್ಳಿ, ಗಂಟಗೌಡನಹಳ್ಳಿ, ಬಿ.ಹೊಸೂರು ಮತ್ತು ಎಸ್.ಐ.ಕೋಡಿಹಳ್ಳಿ ತಲಾ ಒಂದು ಬಸ್‌ಗಳಲ್ಲಿ 702 ಯಾತ್ರಾರ್ಥಿಗಳು ಧರ್ಮಯಾತ್ರೆಗೆ ಹೊರಟರು.