

ತುಮಕೂರು : ಸ್ವ-ಸಹಾಯ ಸಂಘದ ಮೂಲಕ ಗ್ರಾಮೀಣ ಜನರು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ರಾಜ್ಯದೆಲ್ಲೆಡೆ ಕೆಲಸ ಮಾಡುತ್ತಿದೆ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಕಾರ್ಯಕರ್ತರಿಗೆ ಮಾರ್ಗದರ್ಶನ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಗತ್ತಿಗೆ ಅನ್ನ ನೀಡುವ ಕೃಷಿಕ ಶ್ರೇಷ್ಠನಾಗಿದ್ದಾನೆ, ಕಾಯಕದ ಕಾರಣಕ್ಕಾಗಿಯೇ ಎಲ್ಲೆಡೆಯೂ ರೈತರನ್ನು ಗೌರವಿಸುವ ಗುಣ ಬೆಳೆಸಿಕೊಂಡಿದ್ದೇವೆ, ಕೃಷಿಕರೇ ಹೆಚ್ಚಾಗಿರುವ ಗ್ರಾಮೀಣ ಭಾಗದಲ್ಲಿ ಸ್ವಸಹಾಯ ಸಂಘಗಳ ಮೂಲಕ ಸ್ವಾವಲಂಬಿಗಳಾಗಿ ಬೆಳೆಯಬೇಕು, ದುಡಿಯುವ ಮಾರ್ಗ ಅನುಸರಿಸಬೇಕು ಎಂದರು.
ಸ್ವಸಹಾಯ ಮಾಡಿಕೊಳ್ಳುವ ಅಭ್ಯಾಸ ಬೆಳೆಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು, ದುಡಿಮೆಯೇ ಶ್ರೇಷ್ಠ ಎಂಬುದನ್ನು ತಿಳಿಸಬೇಕು, ಉಳಿತಾಯ ಪ್ರಜ್ಞೆ ಬೆಳೆಸಿಕೊಳ್ಳಬೇಕು, ರಾಜ್ಯದಲ್ಲಿ 1200ಕೋಟಿ ರೂ. ಉಳಿತಾಯ ಮಾಡಲಾಗಿದೆ, ಬ್ಯಾಂಕ್‌ಗಳ ಮೂಲಕ 227 ಕೋಟಿ ರೂ. ಸಾಲ ನೀಡಿದ್ದಾರೆ, ಸಾಲ ಮರುಪಾವತಿಯಲ್ಲಿ ಸದಸ್ಯರು ನಂಬಿಕೆ ಉಳಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂದರು.
ಕರೊನಾ ಸಂದರ್ಭದಲ್ಲಿಯೂ ಎಲ್ಲ ಕಾರ್ಯಕರ್ತರಿಗೂ ವೇತನ, ವೃದ್ಧಾಪ್ಯವೇತನ, ವಿದ್ಯಾರ್ಥಿ ವೇತನ, ಶುದ್ಧನೀರು ನೀಡಿದ್ದೇವೆ. ಜತೆಗೆ 1300 ಹೊಸ ಸಂಘಗಳನ್ನು ಸ್ಥಾಪಿಸಿರುವುದು ನಮ್ಮ ಕಾರ್ಯಕರ್ತರ ಹೆಗ್ಗಳಿಕೆ. ಸಾಲವನ್ನು ಉಪಯುಕ್ತವಾಗಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು, ನಿರ್ಲಕ್ಷಿತರು, ಅನಾಥರಿಗಾಗಿ ’ವಾತ್ಸಲ್ಯ’ ಕಾರ್ಯಕ್ರಮವನ್ನು ಹೇಮಾವತಿ ಹೆಗಡೆ
ರೂಪಿಸಿದ್ದಾರೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಆಳುವ ಸರ್ಕಾರ ಮಾಡಬಹುದಾದ ಕೆಲಸವನ್ನು ಪರ್ಯಾಯವಾಗಿ ನಾಡಿನೆಲ್ಲೆಡೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ, ಮಠಗಳಿಗೆ ಧರ್ಮಸ್ಥಳ ಮಾದರಿಯಾಗಿದೆ ಎಂದರು. ಜಿಲ್ಲೆಯ 5 ತಾಲೂಕಿನ ಎಲ್ಲ ಕಾರ್ಯಕರ್ತರುಗಳಿಗೆ ಹಾಗೂ ಸೇವಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಲಾಯಿತು, ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರಿಗೆ ಆಟೋ ರಿಕ್ಷಾಗಳನ್ನು ವಿತರಿಸಲಾಯಿತು. ಮೇಯರ್ ಫರಿದಾಬೇಗಂ, ಪಾಲಿಕೆ ಆಯುಕ್ತೆ ರೇಣುಕಾ, ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ಆಯುಕ್ತ ಸೀನಪ್ಪ, ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಇದ್ದರು.
ಸಿದ್ಧಗಂಗಾಶ್ರೀ ಸ್ಮರಿಸಿದ ವೀರೇಂದ್ರ ಹೆಗ್ಗಡೆ: ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡುವಾಗ ಸಿದ್ಧಗಂಗಾ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಸ್ಮರಿಸಿಕೊಂಡು ಮಾತು ಆರಂಭಿಸಿದರು, ಸ್ವಾಮೀಜಿ ಅವರಿಗೆ ಕಾಲು ನೋವು ಇದ್ದಾಗ ನಮ್ಮ ಕಾಲೇಜಿನಿಂದ ವೈದ್ಯರನ್ನು ಕಳುಹಿಸಲಾಗಿತ್ತು, ಔಷಧ ಹಚ್ಚಬೇಕಾದ ವೈದ್ಯರು ನಸುಕಿನ 3.30ಕ್ಕೆ ಎದ್ದು ಔಷಧ ಹಚ್ಚಬೇಕಿತ್ತು, ಸೂರ್ಯೋದಯದ ಒಳಗೆ ಕಾಯಕ ಆರಂಭಿಸುತ್ತಿದ್ದ ಸ್ವಾಮೀಜಿ ಅವರನ್ನು ಸದಾ ಸ್ಮರಿಸಿಕೊಳ್ಳಬೇಕು, ನಾನೂ ಸಾಕಷ್ಟು ಸಲ ಶ್ರೀಗಳ ಆಶಿರ್ವಾದಕ್ಕೆ ಬಂದಿದ್ದೆ ಎಂದು ಸ್ಮರಿಸಿದರು.
ಧರ್ಮಸ್ಥಳ ಸಂಸ್ಥೆ ರೂಪಿಸುವ ಕಾರ್ಯಕ್ರಮವನ್ನು ಅರ್ಹರಿಗೆ ಮುಟ್ಟಿಸುವ ಕೆಲಸವನ್ನು ಸಂಸ್ಥೆಯ ಕಾರ್ಯಕರ್ತರು ಮಾಡಿದ್ದಾರೆ, ಸ್ವಾರ್ಥ ಹಾಗೂ ವೈಯಕ್ತಿಕ ಲಾಭ ಪಡೆಯುವ ಬಗ್ಗೆ ಚಿಂತಿಸದೆ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು. ಡಾ.ಡಿ.ವೀರೇಂದ್ರ ಹೆಗ್ಗಡೆ ಧರ್ಮಸ್ಥಳ, ಧರ್ಮಾಧಿಕಾರಿ