

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ನೇತೃತ್ವದಲ್ಲಿ ‘ಎಂ.ಶ್ರೀನಿವಾಸ್ ಧರ್ಮಸ್ಥಳ’ ಯಾತ್ರೆ ಮುಂದುವರಿದಿದೆ. ಗುರುವಾರ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 3,105 ಜನರನ್ನು 50 ಬಸ್‌ಗಳಲ್ಲಿ ಯಾತ್ರೆಗೆ ಕಳುಹಿಸಲಾಯಿತು.
ನಗರದ ಫ್ಯಾಕ್ಟರಿ ವೃತ್ತದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಂ.ಶ್ರೀನಿವಾಸ್, ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಗೆಲ್ಲಿಸಿದ್ದಾರೆ. ಅದೇ ರೀತಿ ಯೋಗೇಶ್ ಅವರನ್ನು ಮುಂದಿನ ದಿನಗಳಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.
ಎಚ್.ಎನ್.ಯೋಗೇಶ್ ಮಾತನಾಡಿ, ರಾಜಕಾರಣಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ಬದಲಿಗೆ ಜನರ ಸೇವೆಗಾಗಿ ಧರ್ಮಯಾತ್ರೆ ಮಾಡಲಾಗುತ್ತಿದೆ. ಜನರ ಆಶೀರ್ವಾದ ಇದ್ದರೆ ಸಾಕು. ರಾಜಕಾರಣವನ್ನು ಹಿಂದಿನಿಂದಲೂ ಮಾಡುತ್ತಿದ್ದೇವೆ. ನಮ್ಮ ಉದ್ದೇಶ ಜನರ ಸೇವೆ ಎಂದರು.
ಮಂಡ್ಯ ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಜಿ.ತಿಮ್ಮೇಗೌಡ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕ ಎಂ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ 2023ಕ್ಕೆ ಜೆಡಿಎಸ್ ಜಯಭೇರಿ ಬಾರಿಸುವ ಮೂಲಕ ಜಿಲ್ಲೆ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಬೇಕು ಎಂದರು.
ನಗರಸಭೆ ಉಪಾಧ್ಯಕ್ಷೆ ಇಶ್ರತ್ ಫಾತಿಮಾ, ಸದಸ್ಯ ನಾಗೇಶ್, ಮುಖಂಡರಾದ ಟಿ.ಸಿ.ಶಂಕರೇಗೌಡ, ವಸಂತರಾಜು, ಪುಟ್ಟಸ್ವಾಮಿ, ಮಹಮದ್ ಇತರರಿದ್ದರು.