ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ಕತ್ತಲು

ಚಿಂತಾಮಣಿಯ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೈದಾನದಲ್ಲಿ ಅಳವಡಿಸಿರುವ ವಿದ್ಯುತ್ ಮತ್ತು ಸೋಲಾರ್ ದೀಪಗಳು ಕೆಟ್ಟುಹೋಗಿ ಇಡೀ ಮೈದಾನದಲ್ಲಿ ಕತ್ತಲು ಆವರಿಸಿದೆ.
30cmy2
ಚಿಂತಾಮಣಿಯ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೈದಾನದಲ್ಲಿ ಅಳವಡಿಸಿರುವ ವಿದ್ಯುತ್ ಮತ್ತು ಸೋಲಾರ್ ದೀಪಗಳು ಕೆಟ್ಟುಹೋಗಿ ಇಡೀ ಮೈದಾನದಲ್ಲಿ ಕತ್ತಲು ಆವರಿಸಿದೆ.
Published on

ವಿದ್ಯುತ್, ಸೋಲಾರ್ ದೀಪಗಳು ಕೆಟ್ಟರೂ ದುರಸ್ತಿಯಿಲ್ಲ- ಅಸಮರ್ಪಕ ಶೌಚಗೃಹ ನಿರ್ವಹಣೆಯಿಂದ ದುರ್ವಾಸನೆ


ಚಿಂತಾಮಣಿ: ಲಕ್ಷಾಂತರ ರೂ. ಆದಾಯ ಬರುತ್ತಿದ್ದರೂ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ವಿಲರಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಇಡೀ ಮೈದಾನ ರಾತ್ರಿ ವೇಳೆ ಕಗ್ಗತ್ತಲಿನಲ್ಲಿ ಮುಳುಗಿದೆ.
ಕ್ರೀಡಾಂಗಣದ ಸುತ್ತಲೂ ಅಳವಡಿಸಿರುವ ವಿದ್ಯುತ್ ಮತ್ತು ಸೋಲಾರ್ ದೀಪಗಳು ವಾರದಿಂದ ಕೆಟ್ಟು ಬೆಳಕಿಲ್ಲದ ಪರಿಣಾಮ ಇಡೀ ಮೈದಾನದಲ್ಲಿ ಕಗ್ಗತ್ತಲು ಆವರಿಸಿದೆ.
ಬೆಳಗಿನ ಜಾವ ಸುಮಾರು 4.30 ಗಂಟೆಗೆ ಮತ್ತು ರಾತ್ರಿ 7 ಗಂಟೆ ಸಮಯದಲ್ಲಿ ವಾಯುವಿಹಾರಕ್ಕೆ ಬರುವವರು ಮೈದಾನದಲ್ಲಿ ಬೆಳಕಿಲ್ಲದೆ ಕತ್ತಲಿನಲ್ಲಿಯೇ ವಾಕಿಂಗ್ ಮಾಡುವಂತಾಗಿದೆ. ಈ ಬಗ್ಗೆ ಮೈದಾನದ ಸಿಬ್ಬಂದಿಯನ್ನು ಕೇಳಿದರೆ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಅವರು ದುರಸ್ತಿ ಮಾಡಿಸುವುದಾಗಿ ಹೇಳಿದ್ದಾರೆ ಎಂಬ ಸಿದ್ಧ ಉತ್ತರ ನೀಡುತ್ತಾರೆಯೇ ವಿನಃ ಸಮಸ್ಯೆ ಬಗೆಹರಿದಿಲ್ಲ.

ದುರ್ವಾಸನೆ
ಮೈದಾನದ ಒಳಗೆ ಮತ್ತು ಹೊರಗಿರುವ ಶೌಚಗೃಹಗಳನ್ನು ನಿಗದಿತ ಸಮಯದಲ್ಲಿ ತೆರೆಯದೆ ಇರುವುದರಿಂದ ವಾಯವಿಹಾರಕ್ಕೆ ಬರುವವರು, ಮಧುಮೇಹಿಗಳು ಕ್ರೀಡಾಂಗಣದ ಮೂಲೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಇದರಿಂದ ದುರ್ವಾಸನೆ ಬೀರುತ್ತಿದೆ.

ಸಚಿವರಿಂದ ಪರಿಶೀಲನೆ
2023ರ ಜೂನ್ 13ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮೈದಾನದ ಪರಿಶೀಲನೆ ನಡೆಸಿದ್ದರು. ಈ ವೇಳೆ ಕ್ರೀಡಾಂಗಣದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಶೌಚಗೃಹ ಇದ್ದರೂ ನೀರಿನ ವ್ಯವಸ್ಥೆ ಇಲ್ಲದೆ ದುರ್ನಾತ ಬೀರುತ್ತಿವೆ, ಕ್ರೀಡಾಪಟುಗಳು ಸೇರಿ ಪ್ರತಿದಿನ ವಾಯುವಿಹಾರಕ್ಕೆ ಬರುವ ಸಾವಿರಾರು ಮಂದಿ ಶೌಚಗೃಹಗಳು ಸುಸ್ಥಿತಿಯಲ್ಲಿಲ್ಲದೆ ತೊಂದರೆಯಾಗಿದೆ ಹಾಗೂ ನಿಗದಿತ ಸಮಯದಲ್ಲಿ ಶೌಚಗೃಹಗಳನ್ನು ತೆರೆಯದೆ, ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಗಿತ್ತು.

ಮರುಕಳಿಸಿದ ಒತ್ತುವರಿ
ಕ್ರೀಡಾಂಗಣದ ಪಶ್ಚಿಮ ಭಾಗದ ಪಾಲಿಟೆಕ್ನಿಕ್ ರಸ್ತೆಯಲ್ಲಿರುವ ಅಂಗಡಿ ಮಾಲಿಕರು ರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನೂ ಸಚಿವರು ಪರಿಶೀಲಿಸಿ, ತೆರವಿಗೆ ಸೂಚಿಸಿದ್ದರು. ಈ ಮೇರೆಗೆ ರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿಯನ್ನು ಕಾಟಾಚಾರಕ್ಕೆಂಬಂತೆ ತೆರವುಗೊಳಿಸಿದ ಅಧಿಕಾರಿಗಳು ಮತ್ತೆ ಅದರತ್ತ ಮುಖ ಮಾಡಲೇ ಇಲ್ಲ. ಇದರಿಂದ ಈ ರಸ್ತೆ ಈಗ ಮತ್ತೆ ಮೊದಲಿನಂತಾಗಿದೆ.
ಕ್ಷೇತ್ರದ ಶಾಸಕ ಹಾಗೂ ಸಚಿವ ಡಾ. ಎಂ.ಸಿ. ಸುಧಾಕರ್ ವಿದೇಶ ಪ್ರವಾಸದಲ್ಲಿದ್ದು, ಝಾನ್ಸಿ ರಾಣಿ ಕ್ರೀಡಾಂಗಣದ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಜಿಲ್ಲಾ ಯವಜನ ಸೇವಾ ಇಲಾಖೆ ಅಧಿಕಾರಿಗಳು ಮೈದಾನದ ಸಮಸ್ಯೆಗಳನ್ನು ಬಗೆಹರಿಸಿ ಬೆಳಕು ಚೆಲ್ಲುತ್ತಾರೆಯೇ ಎಂದು ಕಾದು ನೋಡಬೇಕಿದೆ.


ಪ್ರತಿದಿನ ಸಂಜೆ ಝಾನ್ಸಿ ಮೈದಾನಕ್ಕೆ ವಾಯವಿಹಾರಕ್ಕೆ ಬರುತ್ತೇನೆ. ಒಂದು ವಾರದಿಂದ ಮೈದಾನದಲ್ಲಿ ಒಂದೆರಡು ಸಣ್ಣ ಸೋಲಾರ್ ಲೈಟ್‌ಗಳನ್ನು ಬಿಟ್ಟರೆ ಇತರ ವಿದ್ಯುತ್ ದೀಪಗಳು ಬೆಳಗುತ್ತಿಲ್ಲ. ಸಂಜೆಯ ವೇಳೆ ಬಹುತೇಕ ಹಿರಿಯರು, ಮಧುಮೇಹಿಗಳು ಸೇರಿ ಹಲವರು ವಾಯುವಿಹಾರಕ್ಕೆ ಬರುತ್ತಾರೆ, ಬೆಳಕಿನ ವ್ಯವಸ್ಥೆಯಿಲ್ಲದೆ ಇಡೀ ಮೈದಾನ ಕತ್ತಲಾಗಿರುತ್ತದೆ. ಇದರಿಂದ ಹಿರಿಯರು ಓಡಾಡಲು ತೊಂದರೆಯಾಗಿದೆ. ಜತೆಗೆ ಶೌಚಗೃಹಕ್ಕೆ ಹೋಗಲು ಹರಸಾಹಸ ಪಡಬೇಕಿದೆ. ಈ ಬಗ್ಗೆ ಕ್ರೀಡಾಂಗಣದ ಸಿಬ್ಬಂದಿ ಗಮನ ಸೆಳೆದರೆ ಅಧಿಕಾರಿಗಳತ್ತ ಬೊಟ್ಟು ಮಾಡುತ್ತಾರೆ.
- ಶಿವಲಿಂಗ, ಚೌಡರೆಡ್ಡಿಪಾಳ್ಯ, ಚಿಂತಾಮಣಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net