

ಕಲಬುರಗಿ: ಚಿತ್ತಾಪುರ-ಕರದಳ್ಳಿ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾಕ್ಕೆ ಕೆಲ ಕಿಡಿಗೇಡಿಗಳು ಹಾನಿಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ. ದರ್ಗಾ ಗೇಟ್ ಕೀಲಿ ಮುರಿದು ಸುತ್ತಲೂ ಕಟ್ಟಿರುವ ಕಟ್ಟೆ ಮತ್ತು ಇತರ ವಸ್ತುಗಳನ್ನು ಕಿತ್ತು ಹಾಕಿದ್ದಾರೆ. ಅಲ್ಲದೆ ಕಲ್ಲುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ನಿತ್ಯ ಚಿತ್ತಾಪುರ-ಕರದಳ್ಳಿ ಮಾರ್ಗದಲ್ಲಿ ಸಂಚರಿಸುವ ಜನರು ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದರು. ಗುರುವಾರ ಬೆಳಗ್ಗೆ ಕೆಲವರು ದರ್ಗಾ ಹಾನಿಗೊಳಿಸಿರುವುದು ನೋಡಿ ಜನರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ಶಂಕರಗೌಡ ಪಾಟೀಲ್, ಪಿಎಸ್‌ಐಗಳಾದ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ, ಸಿಬ್ಬಂದಿ ಬಸರೆಡ್ಡಿ, ದತ್ತು ಭೇಟಿ ನೀಡಿ ಪರಿಶೀಲಿಸಿದರು. ದರ್ಗಾದ ಉಸ್ತುವಾರಿ ಸೈಯದ್ ಅಲಿ ಅವರಿಂದ ಮಾಹಿತಿ ಪಡೆದರು. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.