

ಮಂಡ್ಯ: ಗ್ರಾಮೀಣ ಸೊಗಡಿನ ಹಾಗೂ ರಾಜಕೀಯ ವಿಡಂಬಣೆಯ ಕಥಾಹಂದರ ಹೊಂದಿರುವ ದರ್ಬಾರ್ ಚಿತ್ರ ಜೂ.9ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಸುಮಾರು 75 ಚಿತ್ರಮಂದಿರದಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರದ ನಿರ್ದೇಶಕ ವಿ.ಮನೋಹರ್ ತಿಳಿಸಿದರು.
ಓ ಮಲ್ಲಿಗೆ ಮತ್ತು ಇಂದ್ರಧನುಷ್ ಚಿತ್ರದ ಬಳಿಕ ಮೂರನೇ ಚಿತ್ರವಾಗಿ ದರ್ಬಾರ್ ಅನ್ನು ನಿರ್ದೇಶನ ಮಾಡಿದ್ದೇನೆ. ಕಥೆಯೇ ಚಿತ್ರದ ಹೀರೋ ಆಗಿದೆ. ಒಳ್ಳೆಯ ಕಾರಣಕ್ಕೆ ನೈತಿಕ ಪೊಲೀಸ್‌ಗಿರಿ ತೋರಿಸುವ ನಾಯಕನಿಗೆ ಬುದ್ಧಿ ಕಲಿಸಲು ಗ್ರಾಮಸ್ಥರು ಚುನಾವಣೆಯಲ್ಲಿ ಮಾಡುವ ತಂತ್ರವನ್ನು ಚಿತ್ರದಲ್ಲಿ ಕಾಣಬಹುದು. ಮೂರು ಹಾಡು ಹಾಗೂ ಮೂರು ಫೈಟ್‌ಗಳಿವೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ವೈರಲ್ ಆಗಿದ್ದ ನಟ ಉಪೇಂದ್ರ ಹಾಡಿರುವ ಬಂದೇ ಬುಡ್ತು ಎಲೆಕ್ಷನ್ ಹಾಡು ನಮ್ಮ ಚಿತ್ರದ್ದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೂರುವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮದ್ದೂರು ತಾಲೂಕಿನ ಮಾರದೇವನಹಳ್ಳಿ, ಚನ್ನಸಂದ್ರ, ಆತಗೂರು ತೈಲೂರು, ನಿಡಘಟ್ಟ ಸುತ್ತಮುತ್ತ ಚಿತ್ರಿಕರಣ ನಡೆಯಿತು. ಈ ಪೈಕಿ ಹೆಚ್ಚಿನ ಚಿತ್ರಿಕರಣ ಮಾರದೇವನಹಳ್ಳಿಯಲ್ಲಿ ನಡೆದಿದ್ದು, ಗ್ರಾಮದ ಜನರ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ನಾಯಕ ಸತೀಶ್, ಕಲಾವಿದರಾದ ಜಯರಾಮಣ್ಣ, ಕೆಂಚೇಗೌಡ, ಅಶೋಕ್, ಕಾಮಿಡಿ ಕಿಲಾಡಿ ಖ್ಯಾತಿಯ ಸಂತು ಇದ್ದರು.