ಕ್ರೀಡಾ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಿ: ಜೆಎಸ್‌ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟ ಉದ್ಘಾಟಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಸಲಹೆ

10
Published on

ಮೈಸೂರು: ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡಾ ಚಟುವಟಿಕೆಗಳಿಗೂ ಪ್ರಾಶಸ್ತ್ಯವನ್ನು ಕೊಡಬೇಕು. ತಮ್ಮ ನಿರ್ದಿಷ್ಟ ಗುರಿ ಮತ್ತು ಉದ್ದೇಶದೊಂದಿಗೆ ಜೀವನದಲ್ಲಿ ಛಲವನ್ನು ಬೆಳೆಸಿಕೊಳ್ಳಲು ಕ್ರೀಡೆಯೂ ಅಗತ್ಯ ಎಂದು ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಮತ್ತು ಫಿಭಾ ಏಷ್ಯಾ ಭಾರತ ಬಾಸ್ಕೆಟ್‌ಬಾಲ್ ಒಕ್ಕೂಟದ ಅಧ್ಯಕ್ಷರೂ ಅದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಹೇಳಿದರು.
ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಸಂಸ್ಮರಣೆಯ ಅಂಗವಾಗಿ ಸುತ್ತೂರಿನಲ್ಲಿ ಭಾನುವಾರ ಆರಂಭಗೊಂಡ 3 ದಿನಗಳ ಜೆಎಸ್‌ಎಸ್ ಅಂತರ ಸಂಸ್ಥೆಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಚಟುವಟಿಕೆಯಿಂದ ಇರಲು ಕ್ರೀಡೆ ಜತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳ ಅಗತ್ಯವಿದೆ. ಪ್ರತಿ ದಿನವೂ ಒಂದು ಗಂಟೆ ಕಾಲ ಆಟೋಟದಲ್ಲಿ ತೊಡಗಿಸಿಕೊಂಡರೆ ಹೆಚ್ಚಿನ ಲವಲವಿಕೆ ಇರಲಿದೆ ಎಂದು ಹೇಳಿದರು.
ಜೆಎಸ್‌ಎಸ್ ಸಂಸ್ಥೆಯು ಮೌಲ್ಯಯುತವಾದ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸುತ್ತಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದಲ್ಲಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ. ಪ್ರತಿ ವರ್ಷವೂ ಈ ಕ್ರೀಡಾಕೂಟದಲ್ಲಿ ಆಯ್ಕೆಯಾಗುವ ಇಬ್ಬರು ಉತ್ತಮ ಕ್ರೀಡಾಪಟುಗಳಿಗೆ ಐವತ್ತು ಸಾವಿರ ರೂ. ನಗದು ಬಹುಮಾನ ಹಾಗೂ ಒಂದು ಪಾರಿತೋಷಕವನ್ನು ವೈಯುಕ್ತಿಕವಾಗಿ ನೀಡಲಾಗುವುದು. ಸುತ್ತೂರಿನಲ್ಲಿ ಬಾಸ್ಕೆಟ್‌ಬಾಲ್ ಅಕ್ಯಾಡೆಮಿ ಸ್ಥಾಪಿಸುವುದರ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ಕ್ರೀಡಾಕೂಟ ಉದ್ಘಾಟಿಸಿದ ಅಂತರ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಸುಕೇಶ್ ಹೆಗ್ಡೆ ಮಾತನಾಡಿ, ಶಿಸ್ತಿನ ಸಿಪಾಯಿಗಳಂತೆ ಕ್ರೀಡಾಪಟುಗಳು ಪಥಸಂಚಲನ ಮಾಡಿದ್ದಾರೆ. ಇದನ್ನು ನೋಡುವ ಸೌಭಾಗ್ಯ ನನ್ನದಾಗಿದೆ. ಹಳ್ಳಿಯ ಕ್ರೀಡೆಯಾದ ಕಬಡ್ಡಿ ಆಟವು ಮೂಲೆಗುಂಪಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಆಟಕ್ಕೆ ನಮ್ಮ ದೇಶದಲ್ಲಿ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿದೆ. ಸರ್ಕಾರವು ಸಹ ಉದ್ಯೋಗದಲ್ಲಿ ಶೇ.3 ಮೀಸಲಾತಿ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದೆ. ಹಾಗಾಗಿ ಹೆಚ್ಚು ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮಾನವನ ಜೀವನದಲ್ಲಿ ಕ್ರೀಡೆಗಳು ಅವಿಭಾಜ್ಯ ಅಂಗವಾಗಬೇಕು. ವಿದ್ಯಾರ್ಥಿಗಳು ಓದಿಗೆ ಹೇಗೆ ಪ್ರಾಮುಖ್ಯತೆ ನೀಡುತ್ತೀರೊ ಅದೇ ರೀತಿ ಕ್ರೀಡಾ ಚಟುವಟಿಕೆಗಳಲ್ಲಿಯೂ ಆಸಕ್ತಿಯಿಂದ ಭಾಗವಹಿಸಬೇಕು. ಕ್ರೀಡಾಮನೋಭಾವನೆಯನ್ನು ಬೆಳೆಸಿಕೊಳ್ಳುವುದರಿಂದ ಕ್ರೀಡಾಪಟುಗಳಲ್ಲಿ ಉತ್ಸಾಹ ಹೆಚ್ಚುತ್ತದೆ, ಮಾನಸಿಕ ಮತ್ತು ದೈಹಿಕ ಆರೋಗ್ಯ ಬೆಳವಣಿಗೆ ವೃದ್ಧಿಯಾಗುತ್ತದೆ ಎಂದರು.
ಕ್ರೀಡಾಪಟುಗಳ ಪರವಾಗಿ ವೀರರಾಜಿಪುರದ ಜೆಎಸ್‌ಎಸ್ ಪಿ.ಯು. ಕಾಲೇಜಿನ ರಾಜ್ಯಮಟ್ಟದ ಕ್ರೀಡಾಪಟು ಭಾವನ ಹಾಗೂ ಕ್ರೀಡಾಧಿಕಾರಿಗಳ ಪರವಾಗಿ ದೈಹಿಕ ಶಿಕ್ಷಣ ಶಿಕ್ಷಕ ಎಂ.ಕೆ. ಸೋಮಶೇಖರ್ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕ್ರೀಡಾ ವಿಭಾಗದ ನಿರ್ದೇಶಕ ವೆಂಕಟೇಶ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್.ಪಿ. ಮಂಜುನಾಥ್, ಎಸ್. ಶಿವಕುಮಾರಸ್ವಾಮಿ, ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್, ಕ್ರೀಡಾಕೂಟದ ಸಂಚಾಲಕ ಸಂಪತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net