ಪ್ರಾಣಭೀತಿಯಲ್ಲಿ ರಸ್ತೆ ಸಂಚಾರ!: ರಾಜ್ಯ ಹೆದ್ದಾರಿ ಬದಿ ಅಪಾಯಕಾರಿ ಮರಗಳು : ಗಾಳಿಮಳೆಗೆ ಧರೆಗುರುಳಲು ರೆಡಿ

New Project (13)
Published on

ಪ್ರವೀಣ್‌ರಾಜ್ ಕೈೊಲ ಕಡಬ ಪುತ್ತೂರು- ಕಾಣಿಯೂರು- ಸುಬ್ರಹ್ಮಣ್ಯ ರಸ್ತೆಯ ಕಾಣಿಯೂರು, ಬೆಳಂದೂರು ಮುಂತಾದೆಡೆ ಬೃಹತ್ ಗಾತ್ರದ ಮರಗಳು ರಸ್ತೆಗೆ ವಾಲಿಕೊಂಡಿದ್ದು, ಬೀಳುವ ಹಂತದಲ್ಲಿವೆ. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ದ್ವಿಚಕ್ರ ವಾಹನ ಸವಾರರು, ಬಸ್, ಕಾರುಗಳು ಸಂಚರಿಸುತ್ತಿದ್ದು, ವಾಹನ ಸವಾರರು ಭಯದಲ್ಲೇ ಸಂಚರಿಸುವಂತಾಗಿದೆ. ಇಲ್ಲಿ ವಾಹನ ಸವಾರರು ಗಾಳಿ ಮಳೆಗೆ ಎಲ್ಲಿ ಮರಗಳು ಬಿದ್ದು ಅಪಾಯ ಸಂಭವಿಸುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಅಪಾಯಕಾರಿ ಮರ ತೆರವು ಕುರಿತು ಪ್ರತಿ ಗ್ರಾಮಸಭೆಗಳಲ್ಲಿ ಚರ್ಚೆ ನಡೆದರೂ ಸಂಬಂಧಪಟ್ಟ ಇಲಾಖೆ ಮಾತ್ರ ಮರಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಾಯಕಾರಿ ಮರಗಳು ಮರದ ಕೆಳಭಾಗದಲ್ಲಿಯೇ ವಿದ್ಯುತ್ ತಂತಿಗಳು ಹಾದು ಹೋಗಿವೆ. ಮರ ಬಿದ್ದಲ್ಲಿ ವಿದ್ಯುತ್ ತಂತಿಗಳ ಮೇಲೆಯೇ ಬೀಳುತ್ತದೆ. ಇದರಿಂದ ನೂರಾರು ಮನೆಯ ವಿದ್ಯುತ್ ಸಂಪರ್ಕ ಸಹ ಕಡಿತಗೊಳ್ಳಬಹುದು. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಮರ ತೆರವು ಕಾರ್ಯಾಚರಣೆಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ. ರಭಸವಾದ ಮಳೆ ಗಾಳಿಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿ ಸಾಕಷ್ಟು ಅನಾಹುತ ಸೃಷ್ಟಿಸುತ್ತವೆ. ವಾಹನಗಳ ಮೇಲೆ ಬಿದ್ದು ಅಪಾರ ನಷ್ಟ ಉಂಟು ಮಾಡುತ್ತವೆ. ಸಂಚರಿಸುವ ವಾಹನಗಳ ಮೇಲೆ ಮರ ಬಿದ್ದ ಘಟನೆಯೂ ನಡೆದಿದೆ. ಹಲವು ಕಡೆಗಳಲ್ಲಿ ವಿದ್ಯುತ್ ತಂತಿಗಳು ಬಿದ್ದು, ಕಂಬಗಳು ನೆಲಕ್ಕುರುಳಿ ಹಾನಿಯುಂಟಾದ ಘಟನೆಗಳೂ ನಡೆದಿವೆ. ಇಲಾಖೆಯಿಂದ ಅಗತ್ಯ ಕ್ರಮ ಪ್ರತಿ ವರ್ಷ ಹಲವಾರು ಮರಗಳು ಧರಾಶಾಹಿಯಾಗುತ್ತವೆ. ವಿದ್ಯುತ್‌ಲೈನ್ ಮೇಲೆ ಮರ ಬಿದ್ದರಂತೂ ಅನಾಹುತ ಇನ್ನೂ ಹೆಚ್ಚು. ಇಂತಹ ಘಟನೆಗಳು ಪ್ರತಿ ವರ್ಷ ಮರುಕಳಿಸುತ್ತಿದ್ದು, ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಮೊದಲೇ ಎಚ್ಚೆತ್ತುಕೊಂಡು ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಕೆಲವೊಂದು ಪ್ರದೇಶಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಬೃಹತ್ ಗಾತ್ರದ ಮರಗಳ ಕೊಂಬೆಗಳು ರಸ್ತೆಗೆ ಬಾಗಿಕೊಂಡಿರುತ್ತವೆ ಮತ್ತು ಕೆಲವೊಂದು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಅವೈಜ್ಞಾನಿಕವಾಗಿ ರಸ್ತೆ ಬದಿಗಳಲ್ಲಿ ಹಾಕಿರುತ್ತಾರೆ. ರಸ್ತೆಗಳ ಇಕ್ಕೆಲಗಳಲ್ಲಿ ರಸ್ತೆಗೆ ಹತ್ತಿರವಾಗಿ ಪೈಪ್‌ಲೈನ್‌ಗಳಿಗೋಸ್ಕರ ಮಣ್ಣನ್ನು ಅಗೆಯುವುದರಿಂದ ಮಳೆಗಾಲ ಸಮಯದಲ್ಲಿ ವಾಹನ ಸವಾರರಿಗೆ ತೊಂದರೆಯಾಗಿ ಪ್ರಾಣ ಹಾನಿಯಾಗುವ ಸಂಭವ ಜಾಸ್ತಿ. ಸಂಬಂಧಪಟ್ಟ ಮೇಲಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಮರದ ಕೊಂಬೆಗಳನ್ನು ಮತ್ತು ಅಪಾಯಕಾರಿಯಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದರೆ ಹಾಗೂ ಪೈಪ್‌ಲೈನ್ ಹಾಕುವಾಗ ನಿರ್ದಿಷ್ಟ ವ್ಯಾಪ್ತಿಗೆ ನಿಗದಿಪಡಿಸಿದರೆ ಮಳೆಗಾಲದಲ್ಲಿ ಸಂಭವಿಸಬಹುದಾದ ಅಪಾಯಗಳನ್ನು ತಡೆಯಬಹುದು. ಸುಬ್ರಹ್ಮಣ್ಯ ಕೆ.ಎಂ., ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net