ಹೆದ್ದಾರಿ ಬದಿ ಅಪಾಯಕಾರಿ ಮರ : ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಮನೆ, ವಾಹನ ಸಂಚಾರಕ್ಕೆ ಸಂಚಕಾರ ಸಾಧ್ಯತೆ

02
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಗುರುಪುರ ಪಂಚಾಯಿತಿ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನಲ್ಲಿ 5 ವರ್ಷಗಳ ಹಿಂದೆ ಸಂಭವಿಸಿದ ಭೂಕುಸಿತ ದುರಂತದ ಬಳಿಕ ಮನೆ ಕಳೆದುಕೊಂಡು ಸಂತ್ರಸ್ತರಾಗಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿರುವ ಮೊಹಮ್ಮದ್ ಯಾನೆ ಮಾಮು ಎಂಬುವರು ಮನೆಗೆ ಮರ ಬಿದ್ದು ಬಾಡಿಗೆ ಮನೆ ಕಳೆದುಕೊಳ್ಳಬಹುದಾದ ಮತ್ತೊಂದು ಆತಂಕಕ್ಕೊಳಗಾಗಿದ್ದಾರೆ.

ಮನೆ ಕಳೆದುಕೊಂಡಿರುವ ಮಾಮು ತನ್ನ ಮಕ್ಕಳು, ಸೊಸೆ, ಮೊಮ್ಮಕ್ಕಳ ಸಹಿತ 8 ಮಂದಿ ಗುರುಪುರ ಜಂಕ್ಷನ್‌ಗೆ ಅನತಿ ದೂರದಲ್ಲಿರುವ ಬಂಗ್ಲೆಗುಡ್ಡೆ ಹೆದ್ದಾರಿ ಬದಿಯಲ್ಲಿರುವ ವನಭೋಜನದ ಎದುರಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮನೆ ಅಂಗಳದಲ್ಲಿ ಹೆದ್ದಾರಿಗೆ ಚಾಚಿಕೊಂಡು ಅಂದಾಜು ನೂರು ವರ್ಷ ದಾಟಿರಬಹುದಾದ ಬೃಹತ್ ಗೋಳಿ ವೃಕ್ಷವೊಂದಿದೆ. ಮೊನ್ನೆ ಬೀಸಿದ ಬಿರುಗಾಳಿಗೆ ಈ ಮರದ ಬುಡ ಕಿತ್ತು ಮೇಲೆದ್ದಿದ್ದು, ಒಂದೊಮ್ಮೆ ಧರಾಶಾಹಿಯಾದರೆ ಮನೆ, ಹೆದ್ದಾರಿಗೆ ಅಪಾಯ ತಪ್ಪಿದ್ದಲ್ಲ. ಮರಕ್ಕೆ ಹತ್ತಿರದಲ್ಲೇ ಹೆದ್ದಾರಿ ಬದಿಯಲ್ಲಿ ನಾಲ್ಕೈದು ವಿದ್ಯುತ್ ಕಂಬಗಳಿವೆ. ಹಾಗಾಗಿ ಮರದಿಂದ ಮೆಸ್ಕಾಂ ಇಲಾಖೆಗೂ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಅಪಾಯದಲ್ಲಿರುವ ಮರದ ಬಗ್ಗೆ ಪಂಚಾಯಿತಿ ಆಡಳಿತ, ಮೆಸ್ಕಾಂಗೆ ದೂರು ನೀಡಲಾಗಿದೆ. ಮೆಸ್ಕಾಂ ಅಧಿಕಾರಿಗಳ ಸೂಚನೆ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಪಾಟ್ ಪರಿಶೀಲನೆ ಮಾಡಿದ್ದಾರೆ. ಘಟನೆ ನಡೆದು 20 ದಿನವಾದರೂ ಇಲ್ಲಿಯವರೆಗೆ ಮರ ಕಡಿದು ಹಾಕುವ ಬಗ್ಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ.

ಮರದ ಬುಡದ ಸುತ್ತ ಬಿರುಕು ಬಿಟ್ಟಿದೆ. ಯಾವುದೇ ಸಂದರ್ಭದಲ್ಲಿ ಮರ ಬೀಳಬಹುದು. ಒಂದೊಮ್ಮೆ ಮರ ಬಿದ್ದರೆ ಮನೆ, ರಾಷ್ಟ್ರೀಯ ಹೆದ್ದಾರಿ 169ರ ಸಾರಿಗೆ ಸಂಚಾರಕ್ಕೆ ಅಪಾಯ ಕಾದಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಸ್ಪಾಟ್ ಪರಿಶೀಲಿಸಿ ಹೋಗಿರುವ ಅರಣ್ಯ ಇಲಾಖೆಯವರು ಮರ ಕಡಿಯಲು ಇನ್ನೂ ಬಂದಿಲ್ಲ. ಮನೆಯಲ್ಲಿರಲು ಭಯ ಆಗುತ್ತಿದೆ. ಮೊಹಮ್ಮದ್ ಯಾನೆ ಮಾಮು, ಬಾಡಿಗೆ ಮನೆ ನಿವಾಸಿ ಗೋಳಿ ಮರ ಬೀಳುವ ಸ್ಥಿತಿಯಲ್ಲಿದೆ. ಮರ ತೆರವುಗೊಳಿಸುವ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಮಾಡಿದ್ದೇವೆ. ಮರ ಕಡಿಯುವ ಹೊತ್ತಿಗೆ ಸ್ಕೈ-ಲಿಫ್ಟ್ ಒದಗಿಸಲು ಮೆಸ್ಕಾಂಗೆ ಕೇಳಿಕೊಂಡಿದ್ದು, ಹೆದ್ದಾರಿ ಬದಿಯ 4 ಲೈನ್ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ತಂತಿ ತೆರವುಗೊಳಿಸಬೇಕಾಗುತ್ತದೆ. ಹೆದ್ದಾರಿ ವಾಹನ ಸಂಚಾರ ನಿರ್ವಹಣೆಗಾಗಿ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿದ್ದೇವೆ. ಈ ವಾರದಲ್ಲಿ ಮರ ಕಡಿದು ಹಾಕಲು ಅರಣ್ಯ ಇಲಾಖೆಯಿಂದ ಆದೇಶ ಬರಬಹುದು. ರಸೂಲ್ ಸಕನಂಗಡಿ, ಕೈಕಂಬ ಬೀಟ್ ಅರಣ್ಯಾಧಿಕಾರಿ https://www.vijayavani.net/staff-shortage-in-belthangady-animal-husbandry-department https://www.vijayavani.net/guttigaaru-mahashakti-kendra-workers-meeting

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net