ಹೆದ್ದಾರಿ ಇಕ್ಕೆಲಗಳ ಅಪಾಯಕಾರಿ ಮರ ತೆರವು

tree
ಸೀಗೋಡು ಬಳಿ ಮುಖ್ಯರಸ್ತೆಗೆ ವಾಲಿಕೊಂಡಿದ್ದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದರು.
Published on

ಬಾಳೆಹೊನ್ನೂರು: ಕೊಪ್ಪ-ಶೃಂಗೇರಿ ರಸ್ತೆಯ ಸೀಗೋಡು ಬಳಿಯ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಬದಿಯಲ್ಲಿ ರಸ್ತೆಗೆ ವಾಲಿಕೊಂಡಿದ್ದ 5ಕ್ಕೂ ಹೆಚ್ಚು ಬೃಹತ್ ಗಾತ್ರದ ಅಪಾಯಕಾರಿ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದರು.

ಬಾಳೆಹೊನ್ನೂರಿನಿಂದ ಶೃಂಗೇರಿ, ಕೊಪ್ಪ ಮುಖ್ಯರಸ್ತೆಯ ಸೀಗೋಡು, ಇಟ್ಟಿಗೆ, ಹೇರೂರು ಹ್ಯಾಂಡ್‌ಪೋಸ್ಟ್, ಚಿಕ್ಕಮಗಳೂರು ರಸ್ತೆಯ ದೇವದಾನ, ಎಲೆಕಲ್ಲು ಸೇರಿ ಹಲವು ಕಡೆಯ ಮುಖ್ಯರಸ್ತೆಯ ಬದಿಗಳಲ್ಲಿದ್ದ ಖಾಸಗಿ ಎಸ್ಟೇಟ್‌ನ ಕಾಡು ಜಾತಿಯ ಬೃಹತ್ ಗಾತ್ರದ ಮರಗಳು ಒಣಗಿದ್ದವು. ವಾಹನ ಸಂಚಾರ ಹೆಚ್ಚಿರುವ ಈ ರಸ್ತೆಗಳಲ್ಲಿ ಆತಂಕ ಮೂಡಿಸಿತ್ತಲ್ಲದೆ, ಮರಗಳು ಉರುಳಿಬೀಳುವ ಸಾಧ್ಯತೆಗಳಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್ ಖಾಸಗಿ ಎಸ್ಟೇಟ್‌ಗಳ ಮಾಲೀಕರಿಗೆ ನೋಟಿಸ್ ನೀಡಿ ಮರಗಳನ್ನು ಕೂಡಲೆ ತೆರವುಗೊಳಿಸಲು ಸೂಚಿಸಿದ್ದರು. ಒಂದು ವೇಳೆ ತೆರವುಗೊಳಿಸದೆ ಅನಾಹುತ ಸಂಭವಿಸಿದಲ್ಲಿ ಎಸ್ಟೇಟ್ ಮಾಲೀಕರನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾ ಸಿಬ್ಬಂದಿ ಮರಗಳನ್ನು ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net