ತಾವರಗಿ-ಕೋಡ ರಸ್ತೆಯಲ್ಲಿ ಅಪಾಯಕಾರಿ ಗುಂಡಿ

HIREKERUR ROAD PROBLEM
Published on

ಹಿರೇಕೆರೂರ: ತಾಲೂಕು ಕೇಂದ್ರದಿಂದ ತಾವರಗಿ ಮೂಲಕ ಕೋಡ ಗ್ರಾಮಕ್ಕೆ ಸಾಗುವ ಜಿಲ್ಲಾ ಮುಖ್ಯ ಹೆದ್ದಾರಿಯ ಮಧ್ಯೆ ದೊಡ್ಡ ಕಂದಕ ನಿರ್ವಣವಾಗಿದ್ದು, ವಾಹನ ಸವಾರರು ಅಪಾಯ ಎದುರಿಸುವಂತಾಗಿದೆ.

ತಾಲೂಕು ಕೇಂದ್ರದಿಂದ ರಾಣೆಬೆನ್ನೂರಿಗೆ ಹಾದು ಹೋಗುವ ಲೋಕೋಪಯೋಗಿ ಇಲಾಖೆಗೆ ಸೇರಿದ ಜಿಲ್ಲಾ ಮುಖ್ಯ ರಸ್ತೆಯಲ್ಲಿ ತಾವರಗಿ ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿ ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಹೊಂಡ ಬಿದ್ದಿದೆ. ಇದರ ಪಕ್ಕದಲ್ಲಿ ಸಾಲು ಸಾಲು ಮರಗಳಿದ್ದು, ಟೊಂಗೆಗಳು ರಸ್ತೆಗೆ ಅಡ್ಡವಾಗಿ ಬಾಗಿವೆ. ಇಲ್ಲಿಯೇ ಸ್ವಲ್ಪ ಮುಂದೆ ರಸ್ತೆ ತಿರುವು ಇದ್ದು, ವಾಹನಗಳು ವೇಗವಾಗಿ ಬಂದರೆ ಹೊಂಡಗಳು ಗೋಚರಿಸುವುದಿಲ್ಲ. ಇದೀಗ ಮಳೆಗಾಲವಾದ್ದರಿಂದ ಹೊಂಡಗಳು ನೀರಿನಿಂದ ಮುಚ್ಚಿರುತ್ತವೆ. ಹೀಗಾಗಿ ಚಾಲಕರಿಗೆ ಹೊಂಡ ತಿಳಿಯದೆ ಬಿದ್ದು ಗಾಯಗೊಂಡ ಹಲವು ಉದಾಹರಣೆಗಳಿವೆ.

ರಾಣೆಬೆನ್ನೂರ, ದಾವಣಗೆರೆ, ಬೆಂಗಳೂರಿಗೆ ಹೋಗಿ ಬರುವ ರಸ್ತೆ ಇದಾಗಿದ್ದು, ನಿತ್ಯ ಈ ಮಾರ್ಗದಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ದರಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಹೊಂಡವನ್ನು ಮುಚ್ಚಿ ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ತಾವರಗಿಯಿಂದ ಕೋಡ ಹೋಗುವ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನು ಗಮನಿಸಿದ್ದೇನೆ. ಸಹಾಯಕ ಇಂಜನಿಯರ್​ಗೆ ಈಗಾಗಲೇ ಈ ಕುರಿತು ತಿಳಿಸಲಾಗಿದೆ. ಸತತವಾಗಿ ಮಳೆಯಾಗುತ್ತಿರುವುದರಿಂದ ಹೊಂಡ ಮುಚ್ಚಲು ಆಗುತ್ತಿಲ್ಲ. ಮಳೆ ನಿಂತ ಕೂಡಲೇ ಗುಂಡಿಯನ್ನು ಮುಚ್ಚಿಸಲಾಗುವುದು. | ಮಾಲತೇಶ ಕಲ್ಲಮ್ಮನವರ, ಲೋಕೋಪಯೋಗಿ ಇಲಾಖೆ ಎಡಬ್ಲೂಇ ಹಿರೇಕೆರೂರ ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಗುಂಡಿಗಳು ನಿರ್ವಣವಾಗಿದ್ದು, ಸ್ವಲ್ಪ ಮೈಮರೆತರೆ ಸಾಕು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಗುಂಡಿಯನ್ನು ಮುಚ್ಚಿ, ವಾಹನ ಸಂಚಾರವನ್ನು ಸುಗಮಗೊಳಿಸಬೇಕು. | ಲೋಕೇಶ ಕಮಡೊಳ್ಳಿ, ವಾಹನ ಸವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net