ಅಪಾಯಕಾರಿ ನಂದಿಕೂರು ಜಂಕ್ಷನ್, ಸುರಕ್ಷತಾ ವ್ಯವಸ್ಥೆಯಿಲ್ಲದೆ ಅಪಘಾತ ಶೀಘ್ರ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

Nandikuru junction
Published on

ಪಡುಬಿದ್ರಿ: ಅವೈಜ್ಞಾನಿಕ ಕಾಮಗಾರಿಯಿಂದ ಎರಡು ರಾಜ್ಯ ಹೆದ್ದಾರಿಗಳ ಸಂಗಮ ಸ್ಥಳ ನಂದಿಕೂರು ಮುದರಂಗಡಿ ತಿರುವು ಜಂಕ್ಷನ್ ಅಪಘಾತ ವಲಯವಾಗಿ ಮಾರ್ಪಾಡುಗುತ್ತಿದೆ.

ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿರುವ ನಂದಿಕೂರು ಮೂಲಕ ಸಾಗುವ ಪಡುಬಿದ್ರಿ- ಕಾರ್ಕಳ ಹಾಗೂ ಮುದರಂಗಡಿ- ಶಿರ್ವ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ಘನ ವಾಹನಗಳು ಸಂಚರಿಸುತ್ತಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಹೆದ್ದಾರಿ ಇಲಾಖೆ ಕೈಗೊಳ್ಳದ ಪರಿಣಾಮ ಅಪಘಾತ ತಾಣವಾಗುತ್ತಿದೆ. ವಾರದಿಂದೀಚೆಗೆ ಸರಣಿ ಅಪಘಾತಗಳು ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಭಾಗದಲ್ಲಿ ಹೆದ್ದಾರಿ ವಿಸ್ತಾರವಾಗಿದ್ದು ಎರಡೂ ಹೆದ್ದಾರಿಗಳಿಗೆ ತಿರುವು ಪಡೆಯುವಲ್ಲಿ ರಸ್ತೆ ಉಬ್ಬುಗಳಾಗಲಿ, ಸೂಚನಾ ಫಲಕ ಅಥವಾ ವೃತ್ತಗಳನ್ನು ನಿರ್ಮಿಸದಿರುವ ಪರಿಣಾಮ ವಾಹನಗಳು ಎಲ್ಲೆಂದರಲ್ಲಿ ವೇಗವಾಗಿ ಸಂಚರಿಸಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೇ ಪ್ರದೇಶಕ್ಕೆ ಹೊಂದಿಕೊಂಡು ಕೈಗಾರಿಕಾ ಪ್ರದೇಶ ಹಾಗೂ ಹೆದ್ದಾರಿ ಆಸುಪಾಸಿನಲ್ಲಿ ಎರಡು ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದು, ಅಲ್ಲಿಗೆ ತೆರಳುವ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾಗಿದೆ.

ಯುಪಿಸಿಎಲ್, ಕಾಂಜರಕಟ್ಟೆಯಲ್ಲಿನ ಕಂಪನಿ ಹಾಗೂ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ಘಟಕಗಳಿಗೆ ಪ್ರಮುಖ ಸಂಪರ್ಕಕೊಂಡಿಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಘನವಾಹನಗಳು ಸಂಚರಿಸುತ್ತಿದ್ದು, ಸಣ್ಣ ವಾಹನ ಸವಾರರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಈ ಸಮಸ್ಯೆಗಳ ಬಗ್ಗೆ ಸ್ಥಳೀಯರು ಸಂಬಂಧಿಸಿದ ಇಲಾಖೆಗಳಿಗೆ ಹಲವಾರು ಬಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸುಗಮ ಸಂಚಾರಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅವೈಜ್ಞಾನಿಕ ಕಾಮಗಾರಿಯಿಂದ ನಂದಿಕೂರು ಜಂಕ್ಷನ್‌ನಲ್ಲಿ ನಿರಂತರವಾಗಿ ಅಪಘಾತಗಳಾಗುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮಸಭೆಯಲ್ಲಿಯೂ ವಿಷಯ ಪ್ರಸ್ತಾಪಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತಾದರೂ, ಈವರೆಗೆ ಯಾವುದೇ ರೀತಿಯ ಮನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಕೈಗಾರಿಕಾ ಪ್ರದೇಶವಾಗಿರುವ ಈ ಪ್ರದೇಶಕ್ಕೆ ಅಗ್ನಿಶಾಮಕ ಹಾಗೂ ಸರ್ಕಾರಿ ಆಂಬುಲೆನ್ಸ್ ಸೇವೆಯ ತುರ್ತು ಅಗತ್ಯ ಕಲ್ಪಿಸಬೇಕಿದೆ. ಲಕ್ಷ್ಮಣ್ ಎಲ್. ಶೆಟ್ಟಿ ಅರಂತಡೆ ಸ್ಥಳೀಯರು ಹೆದ್ದಾರಿಯಲ್ಲಿ ರಸ್ತೆ ಉಬ್ಬು ನಿರ್ಮಾಣಕ್ಕೆ ಅವಕಾಶವಿಲ್ಲ. ಸ್ಥಳ ಪರಿಶೀಲನೆ ನಡೆಸಿ ಸಂಚಾರ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಂಬಂಧಿಸಿದ ಇಲಾಖೆ ಅಥವಾ ಗ್ರಾಪಂಗೆ ಸೂಚನೆ ನೀಡಲಾಗುವುದು. ದಿಲೀಪ್ ಜಿ.ಆರ್. ಪಡುಬಿದ್ರಿ ಠಾಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net