ಮಂಗಳೂರು ನಗರ ನಡುವೆ ಅಪಾಯಕಾರಿ ಹಳೇ ಕಟ್ಟಡಗಳು; ಪಾಲಿಕೆ ನೊಟೀಸ್‌ಗೆ ಸಿಗದ ಸ್ಪಂದನೆ

mng- june 21- gauri mat Road (must)
ಗೌರಿ ಮಠ ರಸ್ತೆಯಲ್ಲಿ ಗೋಚರಿಸುವ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು.
Published on

ಪ್ರಕಾಶ್ ಮಂಜೇಶ್ವರ ಮಂಗಳೂರು
ವೇಗವಾಗಿ ಅಭಿವೃದ್ಧಿಯಾಗುತ್ತಿರುವ ರಾಜ್ಯದ ಎರಡನೇ ನಗರವೆಂದು ಗುರುತಿಸಲಾಗುವ ಮಂಗಳೂರು ನಗರ ಮತ್ತು ಸುತ್ತಮುತ್ತಲು ಸುಂದರ ಹಾಗೂ ವೈವಿಧ್ಯಮಯ ಕಟ್ಟಡಗಳು ಗೋಚರಿಸುತ್ತವೆ. ದುರದೃಷ್ಟವೆಂದರೆ ಇಂತಹ ಕಟ್ಟಡಗಳ ನಡುವೆಯೇ ಈಗಲೋ ಆಗಲೋ ಬೀಳಬಹುದು ಎಂಬ ಸ್ಥಿತಿಯಲ್ಲಿ ಕೆಲವು ಕಟ್ಟಡಗಳು ಹಾಗೆಯೇ ಉಳಿದಿವೆ. ಶಿಥಿಲಾವಸ್ಥೆಯಲ್ಲಿರುವ ಇಂತಹ ಕಟ್ಟಡಗಳು ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿವೆ!
ನಗರದ ಗೌರಿ ಮಠ ರಸ್ತೆಯಲ್ಲಿ ಉದ್ದಕ್ಕೂ ತೀರಾ ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡಗಳ ಸಾಲು, ಇದರ ಅಡಿಭಾಗದಲ್ಲಿ ದಿನಂಪ್ರತಿ ಶಾಲಾ ಮಕ್ಕಳು, ನೂರಾರು ಜನರು ಓಡಾಡುತ್ತಾರೆ. ನಿರಂತರ ವಾಹನಗಳು ಸಂಚರಿಸುತ್ತವೆ. ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದಲೂ ಕುಟುಂಬದ ವಿವಾದದಿಂದ ಸಮಸ್ಯೆ ಜೀವಂತವಾಗಿ ಉಳಿದಿದೆ. ವಿವಾದ ನ್ಯಾಯಾಲಯದಲ್ಲಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಹಳೇ ಕಟ್ಟಡವನ್ನು ತೆರವುಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದ ವಾರಸುದಾರರಿಗೆ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ.
ಹಂಪನಕಟ್ಟೆಯ ಕೆಥೋಲಿಕ್ ಕ್ಲಬ್ ಮುಂಭಾಗದಲ್ಲಿರುವ ಹಳೇ ಕಟ್ಟಡ ಮತ್ತು ಅದರ ಮುಂಭಾಗ ಹಂಪನಕಟ್ಟೆಯಿಂದ ಬಾವುಟಗುಡ್ಡೆ ಮಾರ್ಗ ವಿವಿಧೆಡೆಗಳಿಗೆ ತೆರಳುವ ಬಸ್ ಹಿಡಿಯಲು ಪ್ರಯಾಣಿಕರು ನಿಲ್ಲುವ ಸ್ಥಳದ ಸಮೀಪ ಒಂದು ಬಹು ಮಹಡಿ ಹಳೇ ಕಟ್ಟಡವಿದ್ದು, ಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈ ಕಟ್ಟಡದ ಕೆಳಗಿನ 3- 4 ಕೊಠಡಿಗಳಲ್ಲಿ ಮಾತ್ರ ಇನ್ನೂ ಜನರು ಇದ್ದಾರೆ.
ಹಂಪನಕಟ್ಟೆ ಸಿಗ್ನಲ್ ಸಮೀಪ ರಸ್ತೆ ಬದಿಯಲ್ಲೇ ಒಂದು ಶಿಥಿಲಾವಸ್ಥೆಯಲ್ಲಿರುವ ಹಳೇ ಕಟ್ಟಡ ದೀರ್ಘಕಾಲದಿಂದ ಉಳಿದುಕೊಂಡಿದೆ. ಅದರ ಅಡಿ ಭಾಗದಲ್ಲಿ ದಿನಂಪ್ರತಿ ಸಹಸ್ರಾರು ಜನರು, ಬಸ್, ಕಾರು, ಮತ್ತಿತರ ವಾಹನಗಳು ಸಂಚರಿಸುತ್ತಿವೆ. ಹೀಗೆ ನಗರ ಪೂರ್ತಿ ಅಡ್ಡಾಡಿದರೆ ಶಿಥಿಲಾವಸ್ಥೆಯಲ್ಲಿ ಇರುವ ಹಲವು ಕಟ್ಟಡಗಳು ಕಾಣಬಹುದು. ದೇಶದ ವಿವಿಧ ಕಡೆಗಳಲ್ಲಿ ನಡೆದ ದುರಂತಗಳಿಂದ ನಾವು ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಈ ಕಟ್ಟಡಗಳು ಸಾಕ್ಷಿಯಾಗಿವೆ.
*ಎರಡು ಕಟ್ಟಡಗಳಿಗೆ ನೋಟಿಸ್
ವಿವಾದ ನ್ಯಾಯಾಲಯದಲ್ಲಿದ್ದು, ಪೂರ್ಣ ಶಿಥಿಲಾವಸ್ಥೆಯಲ್ಲಿರುವ ನಗರದ ಎರಡು ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಕಟ್ಟಡ ನಿಯಮಾವಳಿ ಆಧರಿಸಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪಾಲಿಕೆಯೇ ಶಿಥಿಲ ಕಟ್ಟಡವನ್ನು ತೆರವುಗೊಳಿಸಲಿದೆ ಎಂದು ಮಹಾನಗರ ಪಾಲಿಕೆ ಜಂಟಿ ನಿರ್ದೇಶಕ, ಪ್ರಭಾರ ನಗರ ಯೋಜನೆ ಅಧಿಕಾರಿ ಶಂಕರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

&&&&&

ನಗರದಲ್ಲಿ ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸುವಂತೆ ಅವುಗಳ ಮಾಲೀಕರಿಗೆ ಪಾಲಿಕೆ ವತಿಯಿಂದ ನೋಟಿಸ್ ನೀಡಲಾಗಿದೆ. ಅಪಾಯದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ, ಅದರ ಕಾಮಗಾರಿಯ ಪೂರ್ಣ ವೆಚ್ಚವನ್ನು ಕಟ್ಟಡ ಮಾಲೀಕರಿಂದ ಭರಿಸಲಾಗುವುದು.

* ಆನಂದ್ ಸಿ.ಎಲ್., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು

&&&&&

ಮಂಗಳೂರು ನಗರದಲ್ಲಿ ಕೆಲವು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳು ದೀರ್ಘಕಾಲದಿಂದ ಉಳಿದಿವೆ. ಕಟ್ಟಡ ವಿವಾದ, ವ್ಯಾಜ್ಯದಲ್ಲಿದೆ ಎಂದು ಎಲ್ಲರೂ ಸುಮ್ಮನೆ ಕುಳಿತರೆ ಸಂಭಾವ್ಯ ದುರಂತಕ್ಕೆ ಯಾರು ಹೊಣೆ? ಪಾಲಿಕೆ ಕಡೆಯಿಂದ ಈ ವಿಷಯದಲ್ಲಿ ತುರ್ತು ಗಮನ ಬೇಕು.

* ಹನುಮಂತ ಕಾಮತ್, ಸಾಮಾಜಿಕ ಕಾರ್ಯಕರ್ತರು

&&&&&

ಗೌರಿ ಮಠ ರಸ್ತೆಯಲ್ಲಿ ಇರುವ ಹಳೇ ಕಟ್ಟಡ ವಿವಾದ ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಇರುವುದರಿಂದ ಸಮಸ್ಯೆಯಾಗಿದೆ. ಈ ವಿಷಯದಲ್ಲಿ ಕಾನೂನು ವ್ಯಾಪ್ತಿಯಲ್ಲಿ ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳಲಿದೆ.

* ಪೂರ್ಣಿಮಾ, ಸ್ಥಳೀಯ ಕಾರ್ಪೋರೇಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net