ಬಾವಲಿಯಿಂದ ಮಾರಕ ಕೀಟಗಳ ನಿಯಂತ್ರಣ: ವಿಜ್ಞಾನಿ ರಾಜೇಶ್

Bat workshop
Published on

ಚಿಕ್ಕಮಗಳೂರು: ಕಾಫಿ, ಅಡಕೆ, ತೆಂಗು ಸೇರಿ ವಿವಿಧ ಬೆಳೆಗೆ ಮಾರಕವಾಗಿರುವ ಕೀಟಗಳನ್ನು ಭಕ್ಷಿಸುವ ಬಾವಲಿಗಳನ್ನು ಸಂರಕ್ಷಿಸುವುದರಿಂದ ಸ್ವಾಭಾವಿಕವಾಗಿಯೇ ಕೀಟಬಾಧೆ ನಿಯಂತ್ರಣ ಸಾಧ್ಯ ಎಂದು ಬಿಸಿಐಟಿ ಟ್ರಸ್ಟಿ, ನಾಗರಿಕ ವಿಜ್ಞಾನಿ ರಾಜೇಶ್ ಪುಟ್ಟಸ್ವಾಮಯ್ಯ ಹೇಳಿದರು. ಬೆಂಗಳೂರಿನ ಬಿಸಿಐಡಿ ಹಾಗೂ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಐಡಿಎಸ್‍ಜಿ ಸರ್ಕಾರಿ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಬಾವಲಿಗಳ ಜೀವನ ಕ್ರಮ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ಮನುಷ್ಯನಿಗೆ ಮಾರಕವಾಗಿರುವ ಡೆಂಘೆ, ಚಿಕೂನ್‍ಗುನ್ಯಾ, ಮಲೇರಿಯಾದಂಥ ರೋಗ ವ್ಯಾಪಿಸಲು ಬಹುಪಾಲು ಕಾರಣವಾಗಿರುವ ಸೊಳ್ಳೆಗಳನ್ನು ಕೆಲ ವರ್ಗದ ಬಾವಲಿಗಳು ಆಹಾರವಾಗಿಸಿಕೊಳ್ಳುವ ಮೂಲಕ ಮನುಕುಲಕ್ಕೆ ಒಳಿತು ಮಾಡುತ್ತಿವೆ ಎಂದರು.

ಕರ್ನಾಟಕದಲ್ಲಿ 40 ಪ್ರಭೇದ:
ಕೀಟ ಭಕ್ಷಕ ಬಾವಲಿಗಳು ವಿಶ್ವದ ಎಲ್ಲ ಶೀತ ಪ್ರದೇಶಗಳಲ್ಲಿ ಕಂಡುಬರುತ್ತವೆ. ತೆಳು ಚರ್ಮದ ಅವು ತಂಪು ವಾತಾವರಣ ಇರುವ ರಾತ್ರಿ ವೇಳೆ ಕ್ರಿಯಾಶೀಲವಾಗುತ್ತವೆ. ತಲೆಕೆಳಗಾಗಿ ಗಿಡದಲ್ಲಿ ನೇತಾಡುವ ಕೆಟ್ಟ ವಾಸನೆ ಸೂಸುವ ಬಾವಲಿಗಳು ಪ್ರಕೃತಿಯ ಕೊಂಡಿಯೂ ಹೌದು. ಬಾವುಲಿಗಳಲ್ಲಿ ಸುಮಾರು 1,400 ಪ್ರಭೇದಗಳನ್ನು ಗುರುತಿಸಿದ್ದು ಭಾರತದಲ್ಲಿ ಸಾವಿರಕ್ಕೂ ಹೆಚ್ಚು ವಿಧದ ಬಾವುಲಿಗಳಿವೆ. ಕರ್ನಾಟಕದಲ್ಲಿ 35ರಿಂದ 40 ಜಾತಿಯ ಬಾವುಲಿಗಳು ಕಂಡುಬಂದಿವೆ. ಎರಡು ಗ್ರಾಂ ತೂಕದ ಬಾವುಲಿಗಳಿಂದ ಇತ್ತೀಚೆಗೆ ಫಿಲಿಫೈನ್ಸ್ ನಲ್ಲಿ ಪತ್ತೆಯಾದ 1.5 ಕೆ.ಜಿ. ತೂಗುವ ಬಾವಲಿವರೆಗೂ ವಿವಿಧ ಭಾರ, ಆಕಾರ, ಬಣ್ಣಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು. ಮುಸುಕಿನ ಜೋಳ, ಹತ್ತಿ, ಅವರೇಕಾಯಿಗೆ ಕಾಡುವ ಕಂಬಳಿ ಹುಳುಗಳನ್ನು ಬಾವಲಿಗಳು ತಿಂದು ಸಹಜವಾದ ಕೀಟ ನಿಯಂತ್ರಣಕ್ಕೆ ಕೊಡುಗೆ ನೀಡಿ ರೈತ ಮಿತ್ರ ಎನಿಸಿಕೊಂಡಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಬಾವಲಿಗಳ ಸಂತತಿ ಅಳಿಯುತ್ತಿದೆ ಎಂದು ವಿಷಾದಿಸಿದರು.

ಬಾವಲಿ ಸಂತತಿಯ ಪೋಷಣೆ ಅಗತ್ಯ:
ಮೂಡಿಗೆರೆ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಮಾತನಾಡಿ, ಪ್ರಕೃತಿಯ ಸಮತೋಲನಕ್ಕಾಗಿ ಬಾವಲಿ ಸಂತತಿಯ ಪೋಷಣೆ ಅಗತ್ಯ ಎಂದರು. ಪ್ರಾಚಾರ್ಯ ಡಾ. ಎಸ್.ಇ.ನಟರಾಜ್ ಮಾತನಾಡಿ, ಕೀಟ ನಿಯಂತ್ರಣ ಪರಾಗ ಸ್ಪರ್ಶ ಹಾಗೂ ಬೀಜ ಪ್ರಸಾರದಲ್ಲಿ ರೈತಮಿತ್ರನಾಗಿರುವ ಬಾವಲಿಗಳ ಪ್ರಾಮುಖ್ಯತೆ ಅರ್ಥಮಾಡಿಕೊಳ್ಳಬೇಕು ಎಂದರು. ಬಾವಲಿಗಳ ಜೀವವಿಕಾಸ ಮತ್ತು ಪರಿಸರ ಅಧ್ಯಯನ ಗೋಷ್ಠಿಯಲ್ಲಿ ಸಂಶೋಧನಾ ಸಹಾಯಕಿ ಶಾರದಾಕುಮಾರಿ ಪ್ರಾತ್ಯಕ್ಷಿಕೆ ನೀಡಿದರು. ನಗರೀಕರಣದ ಪರಿಣಾಮ ಬಾವಲಿಗಳ ಆವಾಸ ಸ್ಥಾನಗಳು ನಾಶಗೊಳ್ಳುತ್ತಿರುವ ಪರಿಯನ್ನು ಜೈನ್ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ಚೇತನ್‍ನಾಗ್ ವಿವರಿಸಿದರು. ನಿಶಾಚರಿಗಳಾದ ಬಾವಲಿಗಳ ಶಬ್ಧ ತರಂಗ ಸಾಮರ್ಥ್ಯ ಕುರಿತು ಪ್ರೀತಮ್ ಜಾಧವ್ ವಿಶ್ಲೇಷಿಸಿದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ರಮೇಶ್, ಕಾರ್ಯಕ್ರಮ ಆಯೋಜಕ ಡಾ. ಡಿ.ಎಸ್.ಸೋಮಶೇಖರ್, ಸಹಾಯಕ ಪ್ರಾಧ್ಯಾಪಕಿ ಅನ್ನಪೂರ್ಣೇಶ್ವರಿ, ಡಾ. ಇ.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net