

ಕುಂದಾಪುರ: ಅವೈಜ್ಞಾನಿಕ ರಸ್ತೆ ನಿರ್ಮಾಣ ಮತ್ತು ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ ಸುರಕ್ಷಾ ವ್ಯವಸ್ಥೆಯಿಲ್ಲದೆ ಮಣ್ಣು, ಶಿಲೆ, ಕೆಂಪು ಕಲ್ಲು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದು, ಉಡುಪಿಯಿಂದ ಶಿರೂರು ಗಡಿ ತನಕ ರಾಷ್ಟ್ರೀಯ ಹೆದ್ದಾರಿ ಸಂಚಾರವೇ ಅಪಾಯಕಾರಿಯಾಗಿದೆ.
ಕುಂದಾಪುರದಿಂದ ಬೈಂದೂರು ತನಕದ 35 ಕಿ.ಮೀ. ಸಂಚಾರ ದುಸ್ತರವಾಗಿದೆ. ಒಂದೆಡೆ ಏಕಮುಖದಲ್ಲಿ ಸಂಚರಿಸುವ ವಾಹನಗಳು, ಮುಳ್ಳಿಕಟ್ಟೆಯಿಂದ ತಲ್ಲೂರು ತನಕ ಕಳೆದ 4 ತಿಂಗಳಿಂದ ಸಾಗಿಸುತ್ತಿರುವ ಅನಧಿಕೃತ ಮಣ್ಣು ಸಾಗಾಟ ದೊಡ್ಡ ಸಮಸ್ಯೆಯಾಗಿದೆ. ಗಣಿ ಇಲಾಖೆ ಪರವಾನಗಿ, ಮಣ್ಣು ಸಾಗಾಟದಲ್ಲೂ ಪಾಲನೆಯಾಗಬೇಕಿದ್ದ ನಿಯಮ ಗಾಳಿಗೆ ತೂರಿ ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಕೇಳುವವರಿಲ್ಲ.
ಮುಳ್ಳಿಕಟ್ಟೆಯಿಂದ ಸಾಗಿಸುವ ಮಣ್ಣು ಬೇಸಿಗೆಯಲ್ಲಿ ಧೂಳು ಎಬ್ಬಿಸಿದರೆ, ಮಳೆಗಾದಲ್ಲಿ ಮಣ್ಣಿನರಾಡಿ ದ್ವಿಚಕ್ರ, ಲಘು ವಾಹನಗಳ ರಸ್ತೆ ಬದಿಗೆ ಎಳೆದು ನಿಲ್ಲಿಸುತ್ತದೆ. ಮಣ್ಣು ತುಂಬಿಸಿಕೊಂಡು ಬರುವ ಭಾರಿ ವಾಹನ ಮುಳ್ಳಿಕಟ್ಟೆಯಿಂದ ಅರಾಟೆ ತನಕ ರಸ್ತೆಯೇ ಕಾಣಿಸದಂತೆ ಮಾಡಿದರೆ, ತಲ್ಲೂರಲ್ಲಿ ಮಣ್ಣು ಖಾಲಿ ಮಾಡಿ ರಸ್ತೆಗೆ ಬರುವ ವಾಹನದಲ್ಲಿ ಬರುವ ಶೇಡಿಮಣ್ಣಿ ಹೆದ್ದಾರಿಯನ್ನೇ ಜಾರು ಬಂಡಿಯನ್ನಾಗಿಸಿವೆ.
ಐತಿಹಾಸಿಕ ಕಡಬು ಕೆರೆಗೂ ಅಪಾಯ
ಹೆದ್ದಾರಿಯಲ್ಲಿ ಮಣ್ಣು ಸಾಗಿಸುವುದರಿಂದ ಪ್ರಯಾಣಿಕರಿಗೆ ಮಾತ್ರ ಸಮಸ್ಯೆಯಾಗಿಲ್ಲ. ಹೊಸಾಡು ಗ್ರಾಮ ಮುಳ್ಳಿಕಟ್ಟೆ ಬಳಿ ಇರುವ ಐತಿಹಾಸಿಕ ಕಡಬು ಕೆರೆಗೂ ಅಪಾಯವಿದೆ. ಕಡಬು ಕೆರೆಯನ್ನು ದೇವತೆಗಳು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿದ್ದರು ಎನ್ನುವುದು ಜನಪದ ಕತೆ. ನಿರಂತರ ಮಣ್ಣು ತೆಗೆದು ಜಾಗ ಸಮತಟ್ಟು ಮಾಡುವುದರಿಂದ ಕೆರೆಯಲ್ಲಿ ಹೂಳು ತುಂಬಿ ನೀರಿನ ಸಾಂದ್ರತೆ ಕಡಿಮೆಯಾಗುತ್ತಿದೆ. ಕೆರೆ ದಂಡೆ ಕೂಡ ಭದ್ರವಾಗಿಲ್ಲ, ಎಲ್ಲಾದರೂ ಕೆರೆ ಒಡೆದರೆ ಕೃಷಿ ಬದುಕೇ ಮುಳುಗಿ ಹೋಗುತ್ತದೆ. ಕೆರೆ ದಂಡೆ ಎತ್ತರಿಸಿ, ನೀರು ಶೇಖರಣೆಗೆ ಅನುಕೂಲ ಮಾಡಿಕೊಡಬೇಕು. ಮುಂದೆ ಕೆರೆ ಬದಿಗಿನ ಮಣ್ಣು ತೆಗೆಯುವುದರಿಂದ ಮಣ್ಣಿನ ಸವಕಳಿಗೆ ಕೆರೆ ನಾಶವಾದರೂ ಅಚ್ಚರಿಯಿಲ್ಲ.
ಪರಿಹಾರ ಕಾಣದ ಸಮಸ್ಯೆಗಳು
ಸುಗಮ ಸಂಚಾರಕ್ಕೆ ಹತ್ತು ವರ್ಷದ ಹಿಂದೆ ಹೆದ್ದಾರಿ ವಿಸ್ತರಣೆಗೆ ಚಾಲನೆ ನೀಡಿ ಕುಂದಾಪುರದಿಂದ ಮಂಗಳೂರಿನ ತಲಪಾಡಿ ತನಕ ರಸ್ತೆ ಅಭಿವೃದ್ಧಿ ಆರಂಭವಾಯಿತು. ನಂತರ ಕುಂದಾಪುರದಿಂದ ಕಾರವಾರ ತನಕದ ಹೆದ್ದಾರಿ ಕಾಮಗಾರಿ ಮುಗಿಸಿ, ವಾಹನ ಸಂಚಾರಕ್ಕೆ ಮುಕ್ತವಾದರೂ ಸರ್ವೀಸ್ ರಸ್ತೆ, ಡೈವರ್ಶನ್, ಒಳಚರಂಡಿ, ಜೀಬ್ರಾ ಕ್ರಾಸ್, ಮಳೆಗಾಲದಲ್ಲಿ ಮಳೆ ನೀರಿನ ಸಮಸ್ಯೆ, ಬಸ್ ನಿಲ್ದಾಣ ಹೀಗೆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಸೂಪರ್ ಫಾಸ್ಟ್ ಹೆದ್ದಾರಿಯಲ್ಲೂ ಅವೈಜ್ಞಾನಿಕವಾಗಿ ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲವೆಡೆ ರಸ್ತೆ ವಿಭಜಕ ನಿರ್ಮಿಸಿದ್ದಾರೆ.
ಮಣ್ಣು ತೆಗೆಯುವ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ಮಾಡಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸರು, ಸಂಬಂಧಪಟ್ಟ ಇತರ ಇಲಾಖೆಗಳಿಗೆ ಸೂಕ್ತ ಕ್ರಮಕ್ಕೆ ಸೂಚನೆ ನೀಡಲಾಗುವುದು.
ಕೆ.ರಾಜು, ಉಪವಿಭಾಗಾಧಿಕಾರಿ ಕುಂದಾಪುರ