

ನಿರುಪಯುಕ್ತ ಕೊಳವೆಬಾವಿಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚದೆ, ಅಪಾಯ ಘಟಿಸಿದ ಬಳಿಕ ರಾತ್ರಿ-ಹಗಲು ಕಾರ್ಯಾಚರಣೆಗೆ ಮುಂದಾಗುತ್ತಿದ್ದಾರೆ. ಜಿಲ್ಲೆಯ ಹಲವು ಕಡೆ ಅಪಾಯಕಾರಿ ಕೊಳವೆಬಾವಿಗಳು ಇದ್ದು, ಅಽಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.
ಕೊಳವೆಬಾವಿಗೆ ಮಗು ಬಿದ್ದು, ತಾಸುಗಟ್ಟಲೆ ಕಾರ್ಯಾಚರಣೆ ನಡೆದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಸಂಭವಿಸಿದ ಸಂದರ್ಭ ಎಚ್ಚೆತ್ತು ಕೊಳವೆಬಾವಿ ಮುಚ್ಚುವ ಅಭಿಯಾನ ಮಾಡಲಾಗುತ್ತಿದೆಯಾದರೂ, ಕೊಳವೆಬಾವಿಯಲ್ಲಿ ನೀರಿಲ್ಲ ಎಂದು ತಿಳಿದಾಗ ಕೇಸಿಂಗ್ ಪೈಪ್ ತೆಗೆದು ಎರಡು ಕಲ್ಲು ಹಾಕಿ ಬಿಡುವುದು ಬಿಟ್ಟರೆ ವೈಜ್ಞಾನಿಕವಾಗಿ ಮುಚ್ಚುವ ಕಾರ್ಯವನ್ನು ಯಾರೂ ಮಾಡುತ್ತಿಲ್ಲ. ಇದರಿಂದ ಮಳೆ ನೀರು ಹರಿದು, ವಾಹನಗಳ ಓಡಾಟಕ್ಕೆ ಸಿಲುಕಿ ಅಪಾಯ ಬಾಯಿ ತೆರೆದು ನಿಲ್ಲುತ್ತಿದೆ.
ಖಾಸಗಿ ಜಾಗಗಳಲ್ಲಿ ಕೊಳವೆಬಾವಿ ಕೊರೆಯಬೇಕಾದರೆ ಅಗತ್ಯ ಪರವಾನಗಿ ಪಡೆಯಬೇಕೆಂಬ ನಿಯಮ ಮಾಡಲಾಗಿದೆ. ಆದರೆ ಸ್ಥಳೀಯಾಡಳಿತಗಳು ರಾತ್ರಿ-ಹಗಲು ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆದು ಹೋಗಲು ಯಾವುದೇ ಅನುಮತಿ ಬೇಕಾಗಿರುವುದಿಲ್ಲ. ಇಂಥಹ ಕೊಳವೆಬಾವಿಗಳಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಎಲ್ಲೆಂದರಲ್ಲಿ ಅಪಾಯ ಆಹ್ವಾನಿಸುತ್ತಿದೆ.
ಬೆದ್ರಾಳ ತಿರುವಿನ ನಂದಿಕೇಶ್ವರ ಮಂದಿರ ಬಳಿ ಕೊಳವೆಬಾವಿಯೊಂದು ತುಕ್ಕು ಹಿಡಿದ ಸ್ಥಿತಿಯಲ್ಲಿದ್ದು, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಸರಿಯಾಗಿ ಕಾಣಿಸದೆ ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಅದಕ್ಕೆ ಡಿಕ್ಕಿ ಹೊಡೆಯುತ್ತಿದೆ. ತುಕ್ಕುಹಿಡಿದ ಕಬ್ಬಿಣದ ಪೈಪ್ ವಾಹನದ ಡಿಕ್ಕಿಗೆ ಬಾಯಿ ತೆರೆಯುತ್ತಿದ್ದು, ಮುಂದಿನ ದಿನ ಪಾದಚಾರಿಗಳು ಅಪಘಾತಕ್ಕೊಳಗಾಗುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಾಗರಿಕರ ಆಗ್ರಹ.
ವಾಹನ ಸಿಲುಕಿ ಸಂಕಷ್ಟ
ಬೆದ್ರಾಳ-ಸಾಲ್ಮರ ರಸ್ತೆಯಲ್ಲಿರುವ ನಿರುಪಯುಕ್ತ ಕೊಳವೆಬಾವಿಯಿಂದ ವಾಹನಗಳು ನಿರಂತರ ಅಪಘಾತಕ್ಕೀಡಾಗುತ್ತಿವೆ. ಕಳೆದ ತಿಂಗಳು ವಾಹನಕ್ಕೆ ಸೈಡ್ ಕೊಡಲು ಹೋದ ಕಾರೊಂದು ಅದರಲ್ಲಿ ಸಿಲುಕಿಕೊಂಡು ಚಕ್ರಗಳು ಜಾಮ್ ಆಗಿದ್ದವು. ಬಳಿಕ ಟೋಯಿಂಗ್ ಬಳಸಿ ಕಾರನ್ನು ಕೊಂಡೊಯ್ದಿದ್ದು, ೩೫ ಸಾವಿರ ರೂ. ನೀಡಿ ದುರಸ್ತಿಪಡಿಸಬೇಕಾಗಿ ಬಂದಿತ್ತು. ಇಂತಹ ದುರ್ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಬೆದ್ರಾಳ-ಸಾಲ್ಮರ ರಸ್ತೆ ಕಿರಿದಾಗಿದ್ದು, ಎರಡು ದಿಕ್ಕುಗಳಲ್ಲಿ ವಾಹನ ಬಂದರೆ ದಾರಿ ಬಿಟ್ಟುಕೊಡಲು ಹರ ಸಾಹಸಪಡಬೇಕಾಗುತ್ತದೆ. ಕೊಳವೆಬಾವಿಗಳನ್ನು ಮುಚ್ಚದೆ ಎಷ್ಟೋ ಅನಾಹುತಗಳು ಆದದ್ದು ಪ್ರತಿ ವರ್ಷ ನೋಡಲು ಸಿಗುತ್ತಿದೆ. ರಸ್ತೆ ಬದಿಯಲ್ಲಿರುವ ನಿರುಪಯುಕ್ತ ಕೊಳವೆಬಾವಿಯಿಂದ ಅಪಘಾತ ಸಂಭವಿಸುತ್ತಿದೆ. ಅಪಾಯಕಾರಿಯಾಗಿರುವ ಈ ಕೊಳವೆಬಾವಿಯ ತುಕ್ಕು ಹಿಡಿದ ಪೈಪ್ ಅನ್ನು ತೆಗೆಯುವ ಜತೆಗೆ ಕೊಳವೆಬಾವಿ ಮುಚ್ಚಲು ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ.
| ಶ್ರೀಕರ ಬಿ., ವಾಹನ ಸವಾರ