

ಕುರುಗೋಡು: ಟ್ಟಣದ ವಿವಿಧ ರಸ್ತೆಯಲ್ಲಿ ಗುಂಡಿಗಳು ಅಪಾಯಕ್ಕಾಗಿ ಕಾದು ಕುಳಿತಿದ್ದು, ವಾಹನ ಸವಾರರು ಪ್ರಾಣ ಭೀತಿಯಲ್ಲೇ ಸಂಚರಿಸುವಂತಾಗಿದೆ.
ನಿತ್ಯ ಶಾಲೆ-ಕಾಲೇಜಿಗೆ ಹಾಗೂ ದೈನಂದಿನ ಕಾರ್ಯಕ್ಕಾಗಿ ಪಟ್ಟಣಕ್ಕೆ ಸಾವಿರಾರು ಜನ ಬಂದು ಹೋಗುತ್ತಾರೆ. ಅದರಲ್ಲೂ ದೊಡ್ಡಬಸವೇಶ್ವರ ಆಲಯ, ಸರ್ಕಲ್, ಮುಷ್ಟುಗಟ್ಟೆ, ಬಾದನಹಟ್ಟಿ, ಗೆಣಿಕೆಹಾಳ್, ಎದುರು ಬಸವಣ್ಣ, ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಹಾಗೂ ಪಾದಚಾರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಗ್ಗು ಗುಂಡಿಗಳಿಂದ ಸವಾರರು ಪ್ರಾಣ ಬಿಗಿಹಿಡಿದು ಓಡಾಡುವ ಪರಿಸ್ಥಿತಿ ಬಂದಿದೆ.
ಕಳೆದ ಎರಡು ದಿನದಿಂದ ಸುರಿದ ಮಳೆಯಿಂದ ರಸ್ತೆಯಲ್ಲೇ ನೀರು ನಿಂತಿದೆ. ಇನ್ನು ಸರ್ಕಾರಿ ಆಸ್ಪತ್ರೆ, ಉಪ ನೋಂದಣಿ ಕಚೇರಿ, ತಾಲೂಕು ಆಡಳಿತ ಕಚೇರಿಗಳ ಮುಂಭಾಗ ಕೆಸರು ಗದ್ದೆಯಂತಾಗಿದೆ. ಇದರಿಂದ ಪಾದಚಾರಿಗಳು ತೊಂದರೆ ಅನುಭವಿಸಬೇಕಾಗಿದೆ.
ಇನ್ನು ದ್ವಿಚಕ್ರ ವಾಹನ ಸವಾರರ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕೆಲ ಕಡೆ ಕಾಮಗಾರಿ ಹೆಸರಲ್ಲಿ ಅಗೆದ ಮಣ್ಣು ಸರಿಯಾಗಿ ಮುಚ್ಚಿದಿರುವುದರಿಂದ ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಪಟ್ಟಣದ ಬಹುತೇಕ ರಸ್ತೆಯಲ್ಲಿ ಮಣ್ಣು ಆವರಿಸಿದ್ದು ಸಂಚಾರದ ವೇಳೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರಾದ ಗೊಲ್ಲರ ಗೋವಿಂದ, ಅಬ್ಬಿಗೇರಿ ಕಿರಣ್, ಅಬ್ಬಿಗೇರಿ ಪ್ರವೀಣ್ ಆಗ್ರಹಿಸಿದ್ದಾರೆ.
ಪಟ್ಟಣದ ವಿವಿಧ ರಸ್ತೆ ಮತ್ತು ವೃತ್ತ ಅಭಿವೃದ್ಧಿ ಪಡಿಸಲು ಅನುದಾನ ಮೀಸಲಿದ್ದು, ಸದ್ಯದಲ್ಲಿ ಕಾಮಗಾರಿ ಆರಂಭವಾಗಲಿದೆ. ಜತೆಗೆ ಸ್ವಚ್ಛ ಮತ್ತು ಸುಂದರ ಕುರುಗೋಡು ಮಾಡುವ ಉದ್ದೇಶದಿಂದ ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಟಿ ಶೇಕಣ್ಣ ಅಧ್ಯಕ್ಷ ಪುರಸಭೆ ಕುರುಗೋಡು ರಸ್ತೆಯಲ್ಲಿನ ಗುಂಡಿಯಿಂದ ಸಾಕಷ್ಟು ಕಿರಿಕಿರಿ ಆಗುತ್ತಿದೆ. ಅದರಲ್ಲೂ ಮಳೆ ಬಂದರೆ ಓಡಾಡುವುದಕ್ಕೂ ಕಷ್ಟ, ಜನರು ವಾಹನದಿಂದ ಬಿದ್ದ ಉದಾಹರಣೆಯೂ ಇದೆ. ಹೀಗಾಗಿ ಅಧಿಕಾರಿಗಳು ಸಮಸ್ಯೆ ಸರಿ ಪಡಿಸಬೇಕು. ರಮೇಶ ಸ್ಥಳೀಯ ನಿವಾಸಿ ಕುರುಗೋಡು