

ಸುಭಾಸ ಧೂಪದಹೊಂಡ ಕಾರವಾರ
ಜಿಲ್ಲೆಯ ವಿವಿಧ ಘಟ್ಟ ಪ್ರದೇಶಗಳಲ್ಲಿ ಉಂಟಾಗಿದ್ದ ಗುಡ್ಡ ಕುಸಿತ ತಡೆಗೆ 2 ವರ್ಷ ಕಳೆದರೂ ಯಾವುದೇ ಶಾಶ್ವತ ಕಾಮಗಾರಿ ಆಗಿಲ್ಲ.
ಈಗ ಮತ್ತೆ ಮಳೆಗಾಲ ಬಂದಿದ್ದು, ಘಟ್ಟಗಳಲ್ಲಿ ರಸ್ತೆಯ ಪಕ್ಕ ಧರೆ ಕುಸಿಯಲು ಕಾದು ಕುಳಿತಿದೆ. ಇನ್ನು ಹಲವೆಡೆ ಹೆದ್ದಾರಿ ಜರಿಯುವ ಪರಿಸ್ಥಿತಿಯಲ್ಲಿದೆ. ಭಾರೀ ಮಳೆಯಾದಲ್ಲಿ ಯಾವುದೇ ಸಂದರ್ಭದಲ್ಲಿ ವಾಹನ ಸಂಚಾರ ಬಂದಾಗುವ ಸಾಧ್ಯತೆ ಇದೆ.
2021 ರ ಜುಲೈನಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಅರಬೈಲ್, ಅಣಶಿ ಘಟ್ಟಗಳಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ಕರಾವಳಿಯ ತಾಲೂಕುಗಳು ಮಲೆನಾಡು, ಬಯಲು ಸೀಮೆಯಿಂದ ಸಂಪರ್ಕ ಕಳೆದುಕೊಂಡಿದ್ದವು. ಅದನ್ನು ತಾತ್ಕಾಲಿಕವಾಗಿ ಸರಿಪಡಿಸುವ ಕಾರ್ಯವಾಗಿದೆ. ಆದರೆ, ಶಾಶ್ವತವಾಗಿ ಗುಡ್ಡ ಕುಸಿತ ತಡೆಯುವ ಕಾಮಗಾರಿ ಇದುವರೆಗೂ ನಡೆದಿಲ್ಲ.
ಪಿಡಬ್ಲುಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ತಜ್ಞರು ಆಗಮಿಸಿ, ಪರಿಶೀಲಿಸಿ ಶಾಶ್ವತ ಕಾಮಗಾರಿಗಾಗಿ ಹೆಚ್ಚುವರಿ ಹಣಕಾಸಿನ ಬೇಡಿಕೆಗೆ ಸರ್ಕಾರದಿಂದ ಬಿಡುಗಡೆಯಾಗಿಲ್ಲ.
ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ 34 ರಲ್ಲಿ 2021 ರ ಜುಲೈನಲ್ಲಿ ಮೂರು ಕಡೆ ಭಾರಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ಕೆಲದಿನ ಸಣ್ಣ ವಾಹನವೂ ಓಡಾಡದ ಪರಿಸ್ಥಿತಿ ಇತ್ತು. ನಂತರ ಆ ಇಡೀ ಮಳೆಗಾಲ ಹೆದ್ದಾರಿಯಲ್ಲಿ ಭಾರಿ ವಾಹನಗಳಿಗೆ ನಿಷೇಧ ಹೇರಲಾಗಿತ್ತು.
ಇದರಿಂದ ಜೊಯಿಡಾ, ಹಳಿಯಾಳ, ದಾಂಡೇಲಿಯ ಜನ ಜಿಲ್ಲಾ ಕೇಂದ್ರಕ್ಕೆ ತಲುಪಲು ನೂರಾರು ಕಿಮೀ ಸುತ್ತಿ ಯಲ್ಲಾಪುರ ಮಾರ್ಗವಾಗಿ ಬರಬೇಕಾದ ಪರಿಸ್ಥಿತಿ ಇತ್ತು. ಜೊಯಿಡಾ ಜನ ಜಿಲ್ಲಾ ಆಸ್ಪತ್ರೆಗೆ ತಲುಪಲಾಗದೇ ಪರದಾಡಿದರು. 2022 ರ ಮಳೆಗಾಲದಲ್ಲೂ ಕೆಲ ದಿನ ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇಷ್ಟಾದ ಬಳಿಕವೂ ಹೆದ್ದಾರಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಂಡಿಲ್ಲ.
ಆಗ ಭೇಟಿ ನೀಡಿದ್ದ ಪಿಡಬ್ಲುಡಿ ತಜ್ಞರ ತಂಡ ಇಲ್ಲಿ ‘ೇರಿಯಲ್ ವಾಲ್’ ನಿರ‌್ಮಾಣಕ್ಕೆ ಶಿಾರಸು ಮಾಡಿತ್ತು. ಆದರೆ, ಯೋಜನೆ ಕಡತದಲ್ಲೇ ಇದೆ. ಅದಕ್ಕೆ ಬೇಕಾದ ಹಣ ಮಂಜೂರಾಗಿಲ್ಲ. ಸದ್ಯ ಪಿಡಬ್ಲುಡಿ ಗುಡ್ಡ ಕುಸಿತದ ಸ್ಥಳದಲ್ಲಿ ತೆಂಗಿನ ನಾರಿನ ಬಲೆಯನ್ನು ಅಳವಡಿಸಿದೆ. ಬಿಟ್ಟರೆ ಬೇರ‌್ಯಾವುದೇ ಕಾಮಗಾರಿ ನಡೆಸಲಾಗಿಲ್ಲ.
ಕರಾವಳಿ ಹಾಗೂ ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63. ಮಂಗಳೂರಿನ ಬಂದರಿನಿಂದ ಉತ್ತರ ಕರ್ನಾಟಕ ಭಾಗಕ್ಕೆ ಪೆಟ್ರೋಲ್, ಡೀಸೆಲ್ ಗ್ಯಾಸ್ ಮುಂತಾದ ಅಗತ್ಯ ಸಾಮಗ್ರಿಗಳು ಇದೇ ಹೆದ್ದಾರಿಯಲ್ಲಿ ತಲುಪುತ್ತವೆ.
ಕರಾವಳಿಗೆ ಉತ್ತರ ಕರ್ನಾಟಕ ಭಾಗದಿಂದ ದಿನಸಿ, ತರಕಾರಿ, ಹಣ್ಣು ಮುಂತಾದ ಜೀವನಾವಶ್ಯಕ ವಸ್ತುಗಳು ಇದೇ ಮಾರ್ಗದಲ್ಲಿ ತೆರಳುತ್ತವೆ. 2021 ರಲ್ಲಿ ಅರಬೈಲ್ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾದಾಗ ಕರಾವಳಿಗೆ ತರಕಾರಿ, ಹಾಲಿನ ಕೊರತೆ ಉಂಟಾಗಿತ್ತು. ಒಂದು ಹಂತದಲ್ಲಿ ಇಂಧ ಲಾರಿಗಳೂ ನಿಂತು ಉತ್ತರ ಕರ್ನಾಟಕದ ಕೆಲವೆಡೆ ಪೆಟ್ರೋಲ್, ಡೀಸೆಲ್ ಅಭಾವ ಸೃಷ್ಟಿಯಾಗಿತ್ತು.
ಘಟ್ಟದಲ್ಲಿ 6 ಕ್ಕಿಂತ ಹೆಚ್ಚು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಸ್ವತಃ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದರು. ರಾಷ್ಟ್ರಿಯ ಹೆದ್ದಾರಿ ಇಲಾಖೆಗೆ 100 ಕೋಟಿ ರೂ. ಬಿಡುಗಡೆ ಮಾಡುವ ಭರವಸೆ ನೀಡಿದ್ದರು.
ಆದರೆ, ಸಂಪೂರ್ಣ ಹಣ ಬಿಡುಗಡೆಯಾಗಿಲ್ಲ. ಗುಡ್ಡ ಕುಸಿಯುವ ಸ್ಥಳಗಳಲ್ಲಿ ಸುಮಾರು 50 ಕೋಟಿ ರೂ.ಗಳಲ್ಲಿ ಸುರಕ್ಷತಾ ಗೋಡೆ ಕಟ್ಟುವ ಕಾಮಗಾರಿಗೆ ಪ್ರಸ್ತಾವನೆ ಇನ್ನೂ ಸರ್ಕಾರದಲ್ಲಿ ಬಿದ್ದುಕೊಂಡಿದೆ.
ಜಿಲ್ಲೆಯ ಕರಾವಳಿಗೆ ಸಂಪರ್ಕ ಕಲ್ಪಿಸುವ ಇತರ ಘಟ್ಟದ ರಸ್ತೆಗಳೂ ಸುರಕ್ಷಿತವಾಗಿಲ್ಲ. ಶಿರಸಿ-ಕುಮಟಾ ದೇವಿಮನೆ ಘಟ್ಟದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಇದರಿಂದ ವಾಹನ ಸಂಚಾರ ದುಸ್ತರವಾಗಿದೆ. ಭಾರಿ ಮಳೆಯಾದಲ್ಲಿ ಕತಗಾಲ ಸಮೀಪ ನೀರು ತುಂಬಿ ವಾಹನ ಸಂಚಾರ ಬಂದಾಗಲಿದೆ.
ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ಕೂಡ ಸುರಕ್ಷಿತವಾಗಿಲ್ಲ. ಕಳೆದ ಮಳೆಗಾಲದಲ್ಲಿ ಮಾವಿನಗುಂಡಿ ಸಮೀಪ ಧರೆ ಕುಸಿದು ವಾಹನ ಸಂಚಾರ ಬಂದಾಗಿತ್ತು. ಕುಮಟಾ-ಸಿದ್ದಾಪುರ ದೊಡ್ಡಮನೆ ಘಟ್ಟದ ದಾರಿ ಅತಿ ಇಕ್ಕಟ್ಟಾಗಿದೆ. ಒಟ್ಟಾರೆ ಮಳೆಗಾಲ ಬಂದರೆ ಎಲ್ಲಿ ರಸ್ತೆ ಸರಿ ಇದೆ. ಹೇಗೆ ಹೋಗಬೇಕು. ಎಂದು ಕೇಳಿಕೊಂಡು ಓಡಾಡಬೇಕಾದ ಪರಿಸ್ಥಿತಿ ವಾಹನ ಸವಾರರದ್ದಾಗಿದೆ.
ಅರಬೈಲ್ ಘಟ್ಟದಲ್ಲಿ ಅಪಾಯಕಾರಿ ತಿರುವನ್ನು ವಿಸ್ತರಿಸುವ ಹಾಗೂ ಗುಡ್ಡ ಕುಸಿತ ಸ್ಥಳಗಲ್ಲಿ ಸುರಕ್ಷತೆಯ ಗೋಡೆ ನಿರ್ಮಾಣ ಮಾಡುವ ಪ್ರಸ್ತಾವನೆಗಳನ್ನು ಕಳಿಸಲಾಗಿದೆ.ಅನುಮೋದನೆ ಸಿಕ್ಕಿ ಹಣ ಬಿಡುಗಡೆಯಾದಲ್ಲಿ ಕಾಮಗಾರಿ ನಡೆಸಲಾಗುವುದು.ಮಹೇಶರಾಷ್ಟ್ರೀಯ ಹೆದ್ದಾರಿ ಇಲಾಖೆ ಇಂಜಿನಿಯರ್