ಫ್ಲೋರೈಡ್ ಅಂಶದ ನೀರು ಅಪಾಯ

K HALLI JJM 05 (1)
Published on

ಕೊಂಡ್ಲಹಳ್ಳಿ: ಜನರಿಗೆ ಶುದ್ಧ ನೀರು ನೀಡುವುದು ಜೆಜೆಎಂ ಯೋಜನೆಯ ಮುಖ್ಯ ಉದ್ದೇಶ ಎಂದು ಮೊಳಕಾಲ್ಮೂರು ತಾಲೂಕು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಜೂನಿಯರ್ ಇಂಜಿನಿಯರ್ ಚೇತನ್ ತಿಳಿಸಿದರು.

ಜಿಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ರೀಡ್ಸ್ ಸಂಸ್ಥೆ ಸಹಯೋಗದಲ್ಲಿ ಕೊಂಡ್ಲಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಲಜೀವನ್ ಮಿಷನ್ ಯೋಜನೆಯ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫ್ಲೋರೈಡ್ ಅಂಶವುಳ್ಳ ನೀರು ಸೇವನೆಯಿಂದ ಹಲ್ಲು, ಕೀಲು ಸಂಬಂಧಿತ ರೋಗಗಳು ಜನರನ್ನು ಬಾಧಿಸುತ್ತಿವೆ. ಆದ್ದರಿಂದ ಶುದ್ಧ ನೀರು ಪೂರೈಕೆಗೆ ಜೆಜೆಎಂ ಯೋಜನೆಯಡಿ ಮೊಳಕಾಲ್ಮೂರು ತಾಲೂಕಲ್ಲಿ 16 ಗ್ರಾಪಂ ವ್ಯಾಪ್ತಿಯಲ್ಲಿ 113 ಕಾಮಗಾರಿಗಳಿಗೆ ಯೋಜನಾ ವರದಿ ಮಾಡಲಾಗಿದ್ದು, 53 ಸಂಪೂರ್ಣಗೊಂಡಿವೆ. 13 ಟೆಂಡರ್ ಆಗಬೇಕಿದ್ದು, 27 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಮರಿಯಮ್ಮನಹಳ್ಳಿಯಲ್ಲಿ ತುಂಗಭದ್ರಾ ಹಿನ್ನೀರು ಪೂರೈಕೆಗೆ 2 ಜಾಕ್‌ವೆಲ್ ನಿರ್ಮಿಸಲಾಗಿದೆ. ಕೂಡ್ಲಿಗಿ ತಾಲೂಕಿನ ಶಿವಮ್ಮನಹಳ್ಳಿಯ ಬಳಿ ನೀರು ಶುಧ್ಧೀಕರಣ ಘಟಕ ನಿರ್ಮಿಸಲಾಗಿದೆ. ಅಲ್ಲಿಂದ ಮೊಳಕಾಲ್ಮೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಚಳ್ಳಕೆರೆ, ಪಾವಗಡ, ಚಿತ್ರದುರ್ಗ ತಾಲೂಕು ತುರುವನೂರು ಹೋಬಳಿಗೆ ನೀರು ಪೂರೈಕೆಯಾಗಲಿದೆ ಎಂದರು.

ತುಂಗಭದ್ರಾ ಡ್ಯಾಂನಲ್ಲಿ ನೀರು ಶುದ್ಧೀಕರಣ ಘಟಕದ ನಿರ್ಮಾಣ ಮುಗಿದಿದೆ. ಕೂಡ್ಲಿಗಿ- ಮೊಳಕಾಲ್ಮೂರುವರೆಗಿನ ಅರಣ್ಯ ವ್ಯಾಪ್ತಿ ಪ್ರದೇಶದ 30-40 ಕಿಮೀ ಪೈಪ್‌ಲೈನ್ ಮಾರ್ಗ ಕಾಮಗಾರಿ ಆಗಬೇಕಿದೆ. ಇದಕ್ಕೆ ಕೇಂದ್ರದಿಂದ ಅನುಮತಿ ದೊರೆಯಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ, ಪಶು ಆಸ್ಪತ್ರೆ, ಸಮುದಾಯಭವನಗಳಿಗೆ ಉಚಿತ ಸಂಪರ್ಕ ನೀಡಲಾಗುವುದು ಎಂದು ಹೇಳಿದರು.

ವಸ್ತು ಪ್ರದರ್ಶನಕ್ಕೆ ಗ್ರಾಪಂ ಅಧ್ಯಕ್ಷೆ ಎಂ.ಎಲ್.ಪವಿತ್ರಾ ಚಾಲನೆ ನೀಡಿದರು. ಉಪಾಧಕ್ಷ ಕೆ.ಎಂ.ತಿಪ್ಪೇಸ್ವಾಮಿ, ಸದಸ್ಯೆ ಪಿ.ಶಾಂತಾ, ಪಿಡಿಒ ಎನ್.ಮಲ್ಲಿಕಾರ್ಜುನ್, ಸಿಬ್ಬಂದಿ ಕವಿತಾ, ಮೋಹನ್, ರುದ್ರಪ್ಪ, ಮುಖಂಡರಾದ ಎಚ್.ಸಿ.ಪ್ರದೀಪ್, ಕೆ.ಎ.ಟೀಕೇಶ್ವರಪ್ಪ, ಜಿ.ಪ್ರಕಾಶ್, ಹೋಚಿ ಬೋರಯ್ಯ, ರೀಡ್ಸ್ ಸಂಸ್ಥೆಯ ದಿವಾಕರ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net