

ಕೋಲಾರ: ಶೈಕ್ಷಣಿಕ ಅಭಿವೃದ್ಧಿಯಿಂದ ದೇಶದ ಪ್ರಗತಿ ಎಂದು ಭಾಷಣ ಬಿಗಿಯುವ ಜನಪ್ರತಿನಿಧಿಗಳಿಗೆ ಜಿಲ್ಲೆಯಲ್ಲಿ ನೂರಾರು ಶಾಲಾ ಕೊಠಡಿಗಳು ಕುಸಿಯುವ ಹಂತದಲ್ಲಿದ್ದರೂ ಸರ್ಕಾರದ ಮಟ್ಟದಲ್ಲಿ ಧ್ವನಿಯೆತ್ತಿ ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಒಂದಿಬ್ಬರು ಮಾತ್ರ ಕಾಳಜಿ ತೋರುತ್ತಿದ್ದರೂ, ಎಮ್ಮೆ ಮೇಲೆ ಮಳೆ ಸುರಿಯುವಂತಹ ಪರಿಸ್ಥಿತಿ ಸರ್ಕಾರದ್ದಾಗಿದೆ. ಪರಿಣಾಮ ಶಿಕ್ಷಕರು, ಮಕ್ಕಳು ಜೀವಭಯದಲ್ಲಿ ಕೂರುವಂತಾಗಿದೆ.
ಜಿಲ್ಲೆಯಲ್ಲಿ 9 ಸಾವಿರ ಶಾಲಾ ಕೊಠಡಿಗಳ ಪೈಕಿ 350 ಕೊಠಡಿಗಳು ಬೀಳುವ ಹಂತದಲ್ಲಿವೆ. 2 ಸಾವಿರಕ್ಕೂ ಹೆಚ್ಚು ಕೊಠಡಿಗಳು ಸೋರುತ್ತಿವೆ. ಈ ಸಂಬಂಧ ‘ಸೋರುತ್ತಿವೆ ನೂರಾರು ಸರ್ಕಾರಿ ಶಾಲಾ ಕೊಠಡಿಗಳು’ ಶೀರ್ಷಿಕೆಯಡಿ ‘ವಿಜಯವಾಣಿ’ ಡಿ.15ರಂದು ಸುದ್ದಿ ಪ್ರಕಟಿಸಿತ್ತು. ಈಗ ಸರ್ಕಾರ ಪ್ರತಿ ತಾಲೂಕಿಗೆ 30 ಲಕ್ಷ ರೂ.ಒದಗಿಸಿ ಕೈತೊಳೆದುಕೊಂಡಿದೆ. ಇದರಿಂದ ಸೋರುವ ಎಲ್ಲ ಕೊಠಡಿಗಳನ್ನು ದುರಸ್ತಿಪಡಿಸಲು ಸಾಧ್ಯವಾಗಿಲ್ಲ. ಇದೇ ಕೊಠಡಿಗಳ ಮೇಲ್ಛಾವಣಿಯಿಂದ ಈಗ ಸಿಮೆಂಟ್ ಕಳಚಿ ಬೀಳುತ್ತಿದೆ. ಇದಕ್ಕೆ ಡಿಡಿಪಿಐ ಕಚೇರಿಗೆ ಕೂಗಳತೆ ದೂರದಲ್ಲಿರುವ ಕೋಲಾರದ ಗಾಂಧಿನಗರ ಸರ್ಕಾರಿ ಶಾಲೆ ಉದಾಹರಣೆಯಾಗಿದೆ. ಸೋಮವಾರ ಕೊಠಡಿಯಲ್ಲಿ ಸಿಮೆಂಟ್ ಕಳಚಿ ಬಿದ್ದಿದ್ದು, ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದಾರೆ.
ಬೀಳುವ ಹಂತದಲ್ಲಿರುವ ಕೊಠಡಿಗಳನ್ನು ಕೆಡವಿ ವಿವೇಕ ಕೊಠಡಿ ನಿರ್ವಾಣಕ್ಕೆ ಸರ್ಕಾರ ಮುಂದಾಗಿದೆ. ಆದರೆ ಸೋರುತ್ತಿದ್ದ 2 ಸಾವಿರಕ್ಕೂ ಹೆಚ್ಚು ಕೊಠಡಿಗಳ ಪಾಡೇನು ಎಂಬುದು ಗೊತ್ತಾಗುತ್ತಿಲ್ಲ. ಶಿಕ್ಷಣ ಇಲಾಖೆ ಸರ್ಕಾರದ ಅನುದಾನದಲ್ಲಿ ಪ್ರತಿ ತಾಲೂಕಿಗೆ 20ರಿಂದ 30 ಕೊಠಡಿ ದುರಸ್ತಿಗೆ ಹಣ ಒದಗಿಸಿದೆ. ಆದರೆ ಮುನ್ನೂರಕ್ಕೂ ಹೆಚ್ಚು ಕೊಠಡಿಗಳು ದುರಸ್ತಿಗಾಗಿ ಕಾದು ಕುಳಿತಿದ್ದು, ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳಿಗೆ ಇದು ಕಾಣುತ್ತಿಲ್ಲ.
ತಿಂಗಳ ಹಿಂದೆ ಸುರಿಯುತ್ತಿದ್ದ ಕೊಠಡಿಗಳಲ್ಲಿ ಮಕ್ಕಳು ನೀರಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಇತ್ತು. ಈಗ ಮೇಲಿಂದ ಸಿಮೆಂಟ್, ಮಣ್ಣು ಕಳಚಿ ಬೀಳುತ್ತಿದ್ದು, ಮಕ್ಕಳು, ಶಿಕ್ಷಕರು ಗಾಯಗೊಳ್ಳುವ ಜತೆಗೆ ಮಣ್ಣು, ಧೂಳಲ್ಲಿ ಕುಳಿತುಕೊಳ್ಳುವ ದೌರ್ಭಾಗ್ಯ ಎದುರಾಗಿದೆ. ಸೋರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು ಎಂದು ಶಿಕ್ಷಕರಿಗೆ ಇಲಾಖೆ ಈ ಹಿಂದೆ ಸೂಚಿಸಿತ್ತಾದರೂ, ಈಗ ಛಾವಣಿಯಿಂದ ಬೀಳುವ ಸಿಮೆಂಟ್‌ನಿಂದ ಪಾರಾಗುವುದು ಹೇಗೆ ಎಂಬ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಪರೀಕ್ಷೆಗಳು ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಪಾಲಕರಿದ್ದಾರೆ.
ಇನ್ನು ಸುಸಜ್ಜಿತ ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸಲು ಪಾಲಕರು ಹಿಂಜರಿಯುವ ಈ ಕಾಲದಲ್ಲಿ ಸುರಿಯುವ, ಬೀಳುವ ಹಂತದಲ್ಲಿರುವ ಕೊಠಡಿಗಳನ್ನು ನೋಡಿಯೂ ಯಾರಾದರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವರೇ? ಸರ್ಕಾರದ ಮೇಲೆ ಒತ್ತಡ ತಂದು ಅಗತ್ಯದಷ್ಟು ಅನುದಾನ ಬಿಡುಗಡೆ ವಾಡಿಸಲು ಇವರಿಗೆ ಇರುವ ಸಮಸ್ಯೆಯಾದರೂ ಏನು? ಖಾಸಗಿ ಶಾಲೆಗಳ ಪ್ರಭಾವಿಗಳೇನಾದರೂ ಅಡ್ಡಿಯಾಗಿದ್ದಾರೆಯೇ ಎಂದು ಸಾರ್ವಜನಿಕರು ಅಸವಾಧಾನ ವ್ಯಕ್ತಪಡಿಸುತ್ತಿದ್ದಾರೆ.
ನಗರಸಭೆ 7ನೇ ವಾರ್ಡ್ ವ್ಯಾಪ್ತಿಗೆ ಶಾಲೆ ಬರುತ್ತದೆ. ವಾರ್ಡ್ ಸದಸ್ಯ ಸೂರಿ ಮತ್ತು ಇತರ ಸದಸ್ಯರು ನಗರಸಭೆಯಿಂದ 24.1 ಯೋಜನೆಯಡಿ ಅನುದಾನ ಒದಗಿಸಲು ಯತ್ನಿಸುತ್ತೇವೆ. ಅಗತ್ಯವಾದರೆ ನಾನು ಮತ್ತು ಸ್ನೇಹಿತರು ಬೀಳುವ ಹಂತದಲ್ಲಿರುವ ಈ ಶಾಲೆ ಅಭಿವೃದ್ಧಿಗೆ ವೈಯಕ್ತಿಕ ನೆರವು ಒದಗಿಸುತ್ತೇವೆ.ಪ್ರವೀಣ್‌ಗೌಡ2ನೇ ವಾರ್ಡ್(ಗಾಂಧಿನಗರ) ಸದಸ್ಯ, ನಗರಸಭೆ
ನಗರ ಪ್ರದೇಶದಲ್ಲಿ ದುರಸ್ತಿಯಾಗಬೇಕಿರುವ ಕೊಠಡಿಗಳಿಗೆ ಜಿಪಂ, ತಾಪಂ ಅನುದಾನ ಬಳಸಲು ಬರುವುದಿಲ್ಲ. ಆದರೆ ಸರ್ಕಾರಿ ಅನುದಾನದ ಜತೆಗೆ ದಾನಿಗಳು, ಮತ್ತಿತರ ಸಂಸಂಸ್ಥೆಗಳ ನೆರವಿನಲ್ಲಿ ದುರಸ್ತಿಗೊಳಿಸುತ್ತೇವೆ. ಪ್ರಸ್ತುತ ತರಗತಿಗಳು ನಡೆಯುತ್ತಿರುವುದರಿಂದ ಸ್ವಲ್ಪಮಟ್ಟಿಗೆ ದುರಸ್ತಿಗೆ ಅಡಚಣೆಯಾಗುತ್ತಿದೆ. ಗಾಂಧಿನಗರ ಶಾಲೆ ಕೊಠಡಿ ಪರಿಸ್ಥಿತಿ ಗಮನಕ್ಕೆ ಬಂದಿದ್ದು, ಬಿಇಒ ಅವರನ್ನು ಕೂಡಲೇ ಸ್ಥಳ ಪರಿಶೀಲನೆ ಮತ್ತು ಕ್ರಮಕ್ಕೆ ನಿಯೋಜಿಸಲಾಗಿದೆ. ಯುಕೇಶ್ ಕುಮಾರ್ ಸಿಇಒ, ಜಿಪಂ, ಕೋಲಾರ
ಶಾಲೆ ಅಭಿವೃದ್ಧಿಗೆ ಆಗ್ರಹ
ಕೋಲಾರದ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಶೇ.90ಕ್ಕೂ ಅಧಿಕ ಮಕ್ಕಳು ದಲಿತ ಸಮುದಾಯಕ್ಕೆ ಸೇರಿದವರಿದ್ದಾರೆ. ಈ ಭಾಗದ ಬಹುತೇಕ ಜನರು ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವಷ್ಟು ಸ್ಥಿತಿವಂತರಲ್ಲ. ಜಾತಿ ವಿಭಜಿಸಿ ಮತಕೇಳುವ ರಾಜಕಾರಣಿಗಳು ನಿಜವಾದ ಕಾಳಜಿಯಿದ್ದರೆ ಇನ್ನಾದರೂ ಶಾಲೆ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ.