

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬೇಸಿಗೆ ಆರಂಭವಾಗುತ್ತಿದ್ದಂತೆ ವನಸಂಪತ್ತಿಗೆ ಕಂಟಕ ಎದುರಾಗುತ್ತದೆ, ಅದೇ ರೀತಿ ಪ್ರಾಣಿ ಪಕ್ಷಿಗಳ ಜೀವಕ್ಕೂ ಸಂಚಾಕಾರ ಎದುರಾಗುತ್ತದೆ, ಇದಕ್ಕೆ ಕಿಡಿಗೇಡಿಗಳ ಕೃತ್ಯವೇ ಕಾರಣವಾಗುತ್ತಿದ್ದು, ಬೆಂಕಿ ಅವಘಡ ತಡೆಗಟ್ಟುವುದು ಅರಣ್ಯ ಇಲಾಖೆಗೆ ಪ್ರತೀ ಬಾರಿಯೂ ಸವಾಲಿನ ಕೆಲಸವಾಗುತ್ತಿದೆ.
ಹೌದು. ಬೇಸಿಗೆಯಲ್ಲಿ ಅರಣ್ಯವ್ಯಾಪ್ತಿಯಲ್ಲಿ ಮರಗಿಡಗಳ ಎಲೆಗಳು ಉದುರಿ ರಾಶಿಯಾಗಿರುತ್ತವೆ ಹಾಗೂ ಬೆಟ್ಟಗುಡ್ಡಗಳ ಸಾಲಿನಲ್ಲಿ ಹುಲ್ಲು ಒಣಗಿರುತ್ತದೆ, ಕಿಡಿಗೇಡಿಗಳು ಇವಕ್ಕೆ ಬೆಂಕಿ ಹಾಕುವ ಮೂಲಕ ವನಸಂಪತ್ತಿಗೆ ಹಾಗೂ ಪ್ರಾಣಿಪಕ್ಷಿಗಳ ಜೀವಕ್ಕೆ ಕಂಟಕವಾಗುತ್ತಿದ್ದಾರೆ. ಪ್ರತೀ ಬೇಸಿಗೆಯಲ್ಲಿ ಇದು ಪುನಾವರ್ತನೆಯಾಗುತ್ತಿದೆ. ಅರಣ್ಯ ಇಲಾಖೆಯ ಸಾಕಷ್ಟು ಕಟ್ಟೆಚ್ಚರದ ನಡುವೆಯೂ ಇಂಥ ಕೃತ್ಯಗಳು ಅಲ್ಲಲ್ಲಿ ನಡೆಯುತ್ತಿರುವುದು ಕಂಡಬರುತ್ತಿದೆ.
ಶಿವಗಂಗೆ, ಹುಲುಕುಡಿ ಬೆಟ್ಟ, ಆವತಿ ಬೆಟ್ಟ ಸೇರಿ ವಿವಿಧ ಬೆಟ್ಟಗುಡ್ಡಗಳ ಕಡೆಗೆ ಆಗಮಿಸುವ ಪ್ರವಾಸಿಗರು ಬೆಂಕಿ ಕಡ್ಡಿ ಗೀರಿ ಎಸೆಯುವುದು, ಸೇದಿದ ಬೀಡಿ ಸಿಗರೇಟ್ ತುಂಡುಗಳನ್ನು ಎಸೆಯುವುದು ಮಾಡುತ್ತಾರೆ, ಒಣಹುಲ್ಲಿಗೆ ಹಾಗೂ ಉದುರಿದ ಎಲೆಗಳಿಗೆ ಬೆಂಕಿ ಹಚ್ಚಿ ಮೋಜು ಮಾಡುವ ವಿಕೃತಿಗಳಿಂದಾಗಿ ಇಂಥ ಪರಿಸ್ಥಿತಿ ಎದುರಾಗುತ್ತಿದೆ. ನೆಲಮಂಗಲದ ಪ್ರಸಿದ್ಧ ಕ್ಷೇತ್ರ ಶಿವಗಂಗೆ ಚಾರಣದ ವೇಳೆ ಹಲವು ಪ್ರವಾಸಿಗರು ಬೀಡಿ ಸಿಗರೇಟ್ ಸೇದಿ ಎಸೆಯುವುದು ಕಂಡುಬರುತ್ತಿದೆ. ಬೇಸಿಗೆಯಲ್ಲಿ ಶಿಖರದಲ್ಲಿ ಹುಲ್ಲು ಒಣಗಿರುವುದರಿಂದ ಬೆಂಕಿಕಿಡಿಗೆ ಶಿಖರದ ಬಹುತೇಕ ಪ್ರದೇಶ ಆಹುತಿಯಾಗುತ್ತಿದೆ.
ಸಂಘಟನೆಗಳ ಮನವಿ: ರಣಬಿಸಿಲಿನ ತಾಪಮಾನದಿಂದ ಕುಡಿಯುವ ನೀರು, ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳೂ ಪರಿತಪಿಸುತ್ತವೆ. ಬೇಸಿಗೆಯ ಬಿರುಬಿಸಿಲು ಆರಂಭಗೊಂಡಿದ್ದು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಪರದಾಡುತ್ತಿರುತ್ತವೆ. ಇದರ ಮಧ್ಯೆ ನೀರು ಆಹಾರಕ್ಕೆ ಪರದಾಡುವ ಹೊತ್ತಲ್ಲಿ ಬೆಂಕಿ ಅವಘಡದಿಂದ ಹಲವಾರು ಪ್ರಾಣಿಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಾಧ್ಯವಾದರೆ ಬೆಟ್ಟ ಏರುವ ಮಾರ್ಗದಲ್ಲಿ ಅಲ್ಲಲ್ಲೇ ಆಹಾರ, ಕುಡಿಯುವ ನೀರನ್ನು ಸಂಗ್ರಹಿಸಿಡಿ ಎಂದು ವಿವಿಧ ಸಂಘಟನೆ ಮುಖಂಡರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಹೊಸ ಹುಲ್ಲಿಗಾಗಿ ಬೆಂಕಿ! ಸಾಮಾನ್ಯವಾಗಿ ಅರಣ್ಯದಂಚಿನ ಗ್ರಾಮಗಳಲ್ಲಿ ಬೆಂಕಿ ಅನಾಹುತ ಹೆಚ್ಚು ಕಂಡುಬರುತ್ತದೆ, ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡವರು ಹೊಸ ಹುಲ್ಲಿನ ಆಸೆಗೆ ಒಣ ಹುಲ್ಲಿಗೆ ಬೆಂಕಿ ಹಚ್ಚುವ ಕೃತ್ಯ ಎಸಗುತ್ತಾರೆ. ಇದರಿಂದ ಎಕರೆಗಷ್ಟಲೆ ವನ ಸಂಪತ್ತು ಸುಟ್ಟು ಬೂದಿಯಾಗುತ್ತಿದೆ. ಪ್ರತಿ ವರ್ಷ ಇದು ಪುನಾರವರ್ತನೆಯಾಗುತ್ತಿದ್ದು, ಇದನ್ನು ತಹಬಂದಿಗೆ ತರುವುದು ಅರಣ್ಯ ಇಲಾಖೆಗೆ ದೊಡ್ಡ ಸವಾಲಿನ ಕೆಲಸವಾಗಿದೆ.
ಗ್ರಾಮಗಳಿಗೆ ಚಿರತೆಗಳು ಲಗ್ಗೆ: ಇತ್ತೀಚಿನ ದಿನಗಳಲ್ಲಿ ದೊಡ್ಡಬಳ್ಳಾಪುರ, ನೆಲಮಂಗಲ ಭಾಗಗಳಲ್ಲಿ ಚಿರತೆ ಹಾವಳಿ ಹೆಚ್ಚಿದೆ. ಬೇಸಿಗೆಯಲ್ಲಿ ಅರಣ್ಯಗಳಿಗೆ ಬೆಂಕಿ ಬಿದ್ದರೆ ಚಿರತೆ ಸೇರಿ ಇನ್ನಿತರ ಕಾಡು ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡುತ್ತವೆ, ಮತ್ತೆ ಕಾಡುಪ್ರಾಣಿಗಳ ಹಾವಳಿ ಎಂದು ಜನ ಬೊಬ್ಬೆ ಹೊಡೆಯುತ್ತಾರೆ, ಅವುಗಳನ್ನು ಸೆರೆ ಹಿಡಿದು ಮತ್ತೆ ಕಾಡಿಕಟ್ಟುವಷ್ಟರಲ್ಲಿ ಸಿಬ್ಬಂದಿ ಬೆವರು ಹರಿಸಬೇಕಿದೆ.
ಒಣತ್ಯಾಜ್ಯಗಳಿಂದ ಅಪಾಯ: ಅರಣ್ಯದಂಚಿನಲ್ಲಿ ಸಾಗುವ ವಾಹನ ಸವಾರರು ಪ್ಲಾಸ್ಟಿಕ್ ಬಾಟಲಿ, ಪೇಪರ್ ಸೇರಿ ಒಣ ತ್ಯಾಜ್ಯವನ್ನು ರಸ್ತೆ ಬದಿ ಎಸೆಯುವುದು ಸಾಮಾನ್ಯವಾಗಿದೆ, ದಾರಿಹೋಕರು ಬೀಡಿ-ಸಿಗರೇಟ್ ಸೇದಿ ಒಣ ಹುಲ್ಲಿನ ಮೇಲೆ ಎಸೆಯುವುದರಿಂದ ಬೇಸಿಗೆ ವೇಳೆ ಇಂಥ ತ್ಯಾಜ್ಯಕ್ಕೆ ಬೆಂಕಿ ತಾಗಿದರೆ ಕ್ಷಣಾರ್ಧದಲ್ಲಿ ಅರಣ್ಯ ಪ್ರದೇಶಕ್ಕೆ ಆವರಿಸುತ್ತದೆ.
ಕೃಷಿ ಭೂಮಿ ಹಸನಿಗೆ ಕೃತ್ಯ:
ಕಳೆದ ವರ್ಷ ಮಾಕಳಿ ಬೆಟ್ಟದ ಅಂಚಿನಲ್ಲಿ ಕೃಷಿಭೂಮಿ ಹಸನುಗೊಳಿಸುವ ಕಾರಣಕ್ಕೆ ಬೆಟ್ಟದ ತಪ್ಪಲಿನಲ್ಲಿ ಹಚ್ಚಿದ್ದ ಬೆಂಕಿಗೆ ಭಾಗಶಃ ಬೆಟ್ಟ ಹೊತ್ತಿಉರಿದಿತ್ತು. ಸಾಕಷ್ಟು ವಿವಿಧ ಬಗೆಯ ಸಸಿಗಳು, ಔಷಧಿಯುಕ್ತ ಗಿಡಮರಗಳು ಬೆಂಕಿಗೆ ಆಹುತಿಯಾಗಿದ್ದವು. ಮೊಲ, ಜಿಂಕೆ, ಕಾಡುಹಂದಿಯಂತ ಪ್ರಾಣಿಗಳು ಸುಟ್ಟುಕರಕಲಾಗಿದ್ದವು. ಅದೇ ರೀತಿ ವಿಜಯಪುರ ಹೋಬಳಿ ಕೋರಮಂಗಲ ವ್ಯಾಪ್ತಿಯಲ್ಲಿ ನೀಲಗಿರಿ ತೋಪಿಗೆ ಹಚ್ಚಿದ ಬೆಂಕಿ 30 ಎಕರೆಯಷ್ಟು ತೋಪು ಸುಟ್ಟುಹೋಗಿತ್ತು, ನವಿಲು, ಜಿಂಕೆಯಂಥ ಪ್ರಾಣಿಗಳು ಸುಟ್ಟುಹೋಗಿದ್ದವು.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಅಗ್ನಿ ಅವಘಡಗಳ ತಡೆಗೆ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮವಹಿಸಿದೆ. ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಮುಖ್ಯವಾಗಿ ಕಾಡಂಚಿನಲ್ಲಿ ಬೆಂಕಿ ಹಾಕುವ ಕೃತ್ಯಕ್ಕೆ ಮುಂದಾಗಬಾರದು, ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದರೆ ಅಂಥವರ ವಿರುದ್ಧ ಪ್ರಕರಣ ದಾಖಲಾಗಲಿದೆ. ವನಸಂಪತ್ತು ಹಾಗೂ ಪ್ರಾಣಿಪಕ್ಷಿಗಳ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು.
ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಭಾರ) ಬೆಂ.ಗ್ರಾಮಾಂತರ