ಪ್ರಾಣಬಲಿಗೆ ಕಾಯುತ್ತಿದೆ ತಡೆಬೇಲಿ : ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯಲ್ಲಿ ಅಪಾಯ : ಸಾರ್ವಜನಿಕರಿಂದ ಆಕ್ರೋಶ

New Project (6)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪಾಣೆಮಂಗಳೂರಿನ ಹಳೆಯ ಉಕ್ಕಿನ ಸೇತುವೆಯ ರಕ್ಷಣೆಗೆ ಹಾಕಿರುವ ತಡೆಬೇಲಿ ಪ್ರಾಣ ಬಲಿಗಾಗಿ ಕಾಯುತ್ತಿದೆ...!

ಕಬ್ಬಿಣದ ತಡೆಬೇಲಿ ವಾಲಿ ನಿಂತಿದ್ದು ಅದರ ಆಧಾರ ಸ್ತಂಭ ಬುಡದಿಂದ ಕಿತ್ತು ಬಂದಿದೆ. ಯಾವ ಕ್ಷಣದಲ್ಲಿ ಬೇಕಾದರೂ ಬೀಳುವ ಸಾಧ್ಯತೆ ಇದೆ. ಈ ತಡೆಬೇಲಿಯಿಂದ ಸದ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಸದ್ಯಕ್ಕೆ ಇದರಿಂದ ಯಾವುದೇ ಉಪಯೋಗವಿಲ್ಲದಿದ್ದರೂ ಹಲವು ದಿನಗಳಿಂದ ಅಪಾಯಕಾರಿಯಾಗಿ ವಾಲಿ ನಿಂತಿರುವ ತಡೆಬೇಲಿಯನ್ನು ತೆರವುಗೊಳಿಸುವ ಬಗ್ಗೆ ಪುರಸಭೆ ಅಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಣೆಮಂಗಳೂರಿನ ಉಕ್ಕಿನ ಸೇತುವೆ 111 ವರ್ಷ ಪೂರೈಸಿದೆ. ಅವಿಭಜಿತ ದ.ಕ. ಜಿಲ್ಲೆಯ ಮೊದಲ ಸಂಪರ್ಕ ಸೇತುವೆ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಈ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದರೂ ಪಾಣೆಮಂಗಳೂರಿಗೆ ಸರಕು ಹೊತ್ತು ತರುತ್ತಿದ್ದ ಲಾರಿಗಳ ಸಂಚಾರ ನಿರಾತಂಕವಾಗಿ ಮುಂದುವರಿದಿತ್ತು. ಸೇತುವೆಯಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಳಿಕ ಎಚ್ಚೆತ್ತುಕೊಂಡ ಬಂಟ್ವಾಳ ಪುರಸಭೆ ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ತಡೆಬೇಲಿ ನಿರ್ಮಿಸಿ ಭಾರಿ ವಾಹನಗಳ ಸಂಚಾರ ನಿಷೇಧಿಸಿತು. ಆದರೆ ಕೆಲ ವಾಹನ ಚಾಲಕರು ತಡೆಬೇಲಿಯಲ್ಲೂ ವಾಹನ ನುಗ್ಗಿಸಿದ ಕಾರಣ ತಡೆಬೇಲಿ ಹಿಗ್ಗಿ ಸೇತುವೆ ರಕ್ಷಣೆಗಿದ್ದ ಬೇಲಿ ಕಮಾನಿನಂತಾಗಿ ನಿಷ್ಪ್ರಯೋಜಕವಾಗಿದೆ. ಈಗ ಬುಡಸಮೇತ ಕಿತ್ತು ಬಂದಿದ್ದು ಅಪಾಯಕಾರಿಯಾಗಿ ವಾಲಿ ನಿಂತಿದೆ.

ಅಪಾಯಕ್ಕೆ ಆಹ್ವಾನ

ಪಾಣೆಮಂಗಳೂರು, ನಂದಾವರ, ಸಜೀಪ ಮತ್ತಿತರ ಭಾಗಗಳಿಂದ ಬರುವ ಜನರು ಈಗಲೂ ಪಾಣೆಮಂಗಳೂರು ಹಳೆಯ ಸೇತುವೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಲಘು ವಾಹನಗಳ ಸಂಚಾರಕ್ಕೆ ಈಗಲೂ ಈ ಸೇತುವೆ ಸುರಕ್ಷಿತವಾಗಿದೆ. ಇಲ್ಲಿ ಕಳಪೆ ಗುಣಮಟ್ಟದ ತಡೆಬೇಲಿ ಹಾಕಿದ ಬಳಿಕ ಸೇತುವೆ ಮೇಲಿನ ಪ್ರಯಾಣ ಸುರಕ್ಷಿತವಾಗಿದೆ. ತಾಲೂಕಿನಲ್ಲಿ ಕೆಲವು ದಿನಗಳಿಂದ ಭಾರಿ ಗಾಳಿ ಮಳೆ ಸುರಿಯುತ್ತಿದೆ. ದೊಡ್ಡ-ದೊಡ್ಡ ಮರಗಳೇ ಗಾಳಿಗೆ ಉರುಳಿ ಬೀಳುವಾಗ ಬುಡಸಮೇತ ಕಿತ್ತು ಬಂದು ವಾಲಿ ನಿಂತ ತಡೆಬೇಲಿ ಉಳಿಯಬಹುದೇ ಎನ್ನುವುದು ಸಾರ್ವಜನಿಕರ ಪ್ರಶ್ನೆ. ತಡೆಬೇಲಿ ಬದಲಾಯಿಸದೇ ಏತಕ್ಕಾಗಿ ಇನ್ನೂ ಅಲ್ಲೇ ಉಳಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆಗೆ ಪುರಸಭೆ ಅಧಿಕಾರಿಗಳು ಉತ್ತರಿಸಬೇಕಾಗಿದೆ.

ಅಸುರಕ್ಷಿತವಾಗಿರುವ ತಡೆಬೇಲಿಯನ್ನು ತೆರವು ಮಾಡುವ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದಕ್ಕೆ ಸಂಬಂಧಪಟ್ಟ ಪತ್ರ ವ್ಯವಹಾರ ಮಾಡಲಾಗಿದೆ. ಈ ಬಗ್ಗೆ ಇಲ್ಲಿಗೆ ಭೇಟಿ ನೀಡಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಗಮನಕ್ಕೂ ತರಲಾಗಿದೆ. ಸಂಬಂಧಪಟ್ಟ ಇಂಜಿನಿಯರ್ ಜತೆ ಮಾತುಕತೆ ನಡೆಸಲಾಗುವುದು. ಅರ್ಚನಾ ಡಿ.ಭಟ್ ತಹಸೀಲ್ದಾರ್, ಬಂಂಟ್ವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net