

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಪ್ರಕೃತಿ ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ಅ.5 ಮತ್ತು 6ರಂದು ಹುಬ್ಬಳ್ಳಿಯಲ್ಲಿ ದಾಂಡಿಯಾ ಉತ್ಸವ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಪರಶುರಾಮ ಪೂಜಾರ ತಿಳಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ತೋಳನಕೆರೆಯಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ದಾಂಡಿಯಾ ಉತ್ಸವವನ್ನು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಎರಡು ಸ್ಥಳಗಳಲ್ಲಿ ಉತ್ಸವ ಆಯೋಜಿಸಲಾಗಿದೆ. 5 ರಂದು ಸಂಜೆ 6ಗಂಟೆಗೆ ತೋಳನಕೆರೆ ಹಾಗೂ 6ರಂದು ಸಂಜೆ 6 ಗಂಟೆಗೆ ಬಾಲಾಜಿ ಆಸ್ಪತ್ರೆ ಎದುರಿನ ಕಲ್ಲೂರ ಲೇಔಟ್ನಲ್ಲಿ ನಡೆಯಲಿದೆ ಎಂದರು.
ಬೆಸ್ಟ್ ಗ್ರುಪ್ ಡ್ಯಾನ್ಸ್, ಬೆಸ್ಟ್ ಕಪಲ್(ದಂಪತಿ), ಬೆಸ್ಟ್ ಕಾಸ್ಟೂಮ್ ಎನರ್ಜೆನಿಕ್ ಗ್ರುಪ್ ಹೀಗೆ ನಾನಾ ವಿಭಾಗದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ್, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಮಹೇಶ ಟೆಂಗಿನಕಾಯಿ, ಮುಖಂಡರಾದ ಗೋವಿಂದ ಜೋಶಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಹು-ಧಾ ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಘಾಳಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಫೌಂಡೇಷನ್ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಅಚ್ಚಳ್ಳಿ, ನಿರ್ದೇಶಕರಾದ ವಿವೇಕ ಪರಮಾದಿ, ರಾಕೇಶ ಅಚ್ಚಳ್ಳಿ, ಅಮೀತ ಪೂಜಾರ ಇದ್ದರು.