

ಹುಬ್ಬಳ್ಳಿ: ದಸರಾ ಹಬ್ಬದ ನಿಮಿತ್ತ ಕಮರಿಪೇಟ ದಸರಾ ಉತ್ಸವ ಕಮಿಟಿ ಹಾಗೂ ಅಂಬಿಕಾ ಜುವೆಲರ್ಸ್ ವತಿಯಿಂದ ಕನ್ನಡದ ನಂ. 1 ದಿನ ಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಇಲ್ಲಿಯ ಮೂರುಸಾವಿರ ಮಠದ ಆವರಣದಲ್ಲಿ ಶನಿವಾರ ದಾಂಡಿಯಾ ರಾಜ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿ ಮಾತನಾಡಿ, ನಾಡ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಮಾಡುತ್ತಿರುವುದು ಶ್ಲಾಘನೀಯ. ಈಗಾಗಲೇ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬ, ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮೊದಲು ದಾಂಡಿಯಾ ನೃತ್ಯವನ್ನು ಗುಜರಾತಿಗಳು, ರಾಜಸ್ತಾನಿಯರು ಮಾಡುತ್ತಿದ್ದರು. ಈಗ ಸಮಸ್ತ ಹಿಂದು ಸಮಾಜದವರು ಮಾಡುತ್ತಿದ್ದಾರೆ. ಇದರಿಂದ ನಮ್ಮ ಹಿಂದು ಸಂಸ್ಕೃತಿ ಮತ್ತು ಮಹತ್ವ ವಿಸ್ತಾರಗೊಳ್ಳುತ್ತಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದಸರಾ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಕರ್ನಾಟಕದ ಮೈಸೂರಿನಲ್ಲಿಯೂ ದಸರಾ ಹಬ್ಬವನ್ನು ಜಂಬೂಸವಾರಿ ನಡೆಸುವ ಮೂಲಕ ಆಚರಿಸಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಪ್ರತಿಯೊಂದು ಹಬ್ಬವನ್ನು ವಿಶೇಷವಾಗಿ ಆಚರಿಸುತ್ತ ಬರಲಾಗುತ್ತಿದೆ. ಅದರಲ್ಲಿ ದಸರಾ ಹಬ್ಬವೂ ವಿಶೇಷವಾಗಿ ಆಯೋಜಿಸಿರುವುದು ಖುಷಿಯ ವಿಚಾರ ಎಂದರು.
ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಾಜಿ ಶಾಸಕ ಅಶೋಕ ಕಾಟವೆ, ದಸರಾ ಉತ್ಸವ ಕಮಿಟಿ ಅಧ್ಯಕ್ಷ ವಿಠ್ಠಲಸಾ ಲದವಾ, ಪ್ರಮುಖರಾದ ಶಶಿಕುಮಾರ ಮೆಹರವಾಡೆ, ವೀರು ಕಠಾರೆ, ಸುಭಾಷ ಭಾಂಡಗೆ, ವಿಜಯ ಕಲಬುರ್ಗಿ, ಪ್ರಕಾಶ ಬುರಬುರೆ, ವಿಜಯ ಮಿಸ್ಕಿನ್, ಸಚಿನ್ ಮಿಸ್ಕಿನ್, ಗಣೇಶ ಲದವಾ, ಸಿದ್ಧಾರ್ಥ ಲದವಾ, ನಾಗರಾಜ ಮಿಸ್ಕಿನ್, ವಿಜಯ ಪವಾರ, ಪವನ ಪವಾರ್ ಇತರರು ಇದ್ದರು.
ಡಿಜೆ ಶಬ್ದಕ್ಕೆ ಹೆಜ್ಜೆ: ಬಹಳಷ್ಟು ಯುವತಿಯರು ಡಿಜೆ ಶಬ್ದಕ್ಕೆ ಹೆಜ್ಜೆ ಹಾಕಿದರು. ಕೋಲಾಟವಾಡಿ ಹಾಡಿಗೆ ಮೆರಗು ತಂದರು. ಸಾಂಪ್ರದಾಯಿಕ ಉಡುಗೆ ತೊಟ್ಟು ಆಗಮಿಸಿ ದಾಂಡಿಯಾ ರಾಸ್, ಬೆಸ್ಟ್ ಗ್ರೂಪ್ ಆಫ್ 5 ದಾಂಡಿಯಾ, ಕಪಲ್ ದಾಂಡಿಯಾ, ಸೋಲೊ ದಾಂಡಿಯಾಕ್ಕೆ ಕುಣಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಈಗಾಗಲೇ 20 ಸಾವಿರ ಉಚಿತ ಕೂಪನ್‌ಗಳನ್ನು ನೀಡಲಾಗಿದೆ. ಸೆ. 28ರಂದು ನಡೆಯಲಿರುವ ದಾಂಡಿಯಾ ನೃತ್ಯದ ನಂತರ ಲಕ್ಕಿ ಡಿಪ್ ಆಯ್ಕೆ ಕಾರ್ಯಕ್ರಮ ಜರುಗಲಿದೆ.