

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ನಾರಾಯಣಪುರ ಸಾಂಸ್ಕೃತಿಕ ವೇದಿಕೆ ವತಿಯಿಂದ ಅ. 7ರಿಂದ 9ರವರೆಗೆ ನಗರದಲ್ಲಿ ದಾಂಡಿಯಾ ನೃತ್ಯೋತ್ಸವ ಏರ್ಪಡಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ರತ್ನಾ ಪಾಟೀಲ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 7ರಂದು ನಾರಾಯಣಪುರದ ರೊದ್ದ ಶ್ರೀನಿವಾಸರಾವ್ ಉದ್ಯಾನದಲ್ಲಿ ಸಂಜೆ 6 ಗಂಟೆಗೆ ನೃತ್ಯೋತ್ಸವದ ಉದ್ಘಾಟನೆ ನಡೆಯಲಿದೆ. ಉಪನಗರ ಪೊಲೀಸ್ ಠಾಣೆ ಸಿಪಿಐ ಬಿ.ಎಸ್. ದಯಾನಂದ, ಪಾಲಿಕೆ ಸದಸ್ಯ ಮಂಜುನಾಥ ಬಟ್ಟೆಣ್ಣವರ ಪಾಲ್ಗೊಳ್ಳುವರು ಎಂದರು.
ಅ. 8 ಮತ್ತು 9 ರಂದು ಸಂಜೆ 6 ರಿಂದ 9 ರವರೆಗೆ ನೃತ್ಯೋತ್ಸವ ಜರುಗಲಿದ್ದು, 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ. ಗುಜರಾತಿ ಮಾದರಿಯಲ್ಲಿ ವೇದಿಕೆ ಸಿದ್ದಪಡಿಸಲಾಗಿದೆ. ಕಲಾ ತಂಡಗಳಿಗೆ ಉಚಿತ ಪ್ರವೇಶವಿದೆ ಎಂದರು.
ವೇದಿಕೆ ಗೌರವ ಅಧ್ಯಕ್ಷ ಎನ್.ಜಿ. ಗಲಗಲಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ದಾಂಡಿಯಾ ನೃತ್ಯೋತ್ಸವ ಆಯೋಜಿಸಲಾಗಿದೆ. ಯುವ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಭುವನೇಶ್ವರಿ, ಜ್ಯೋತಿ, ವಿಮಲಾಕ್ಷಿ ಗಲಗಲಿ, ಸಂತೋಷ, ಇತರರು ಇದ್ದರು.