

ಮೈಸೂರು: ಸ್ವಾತಂತ್ರೃದ ಅಮೃತ ಮಹೋತ್ಸವ ಪ್ರಯುಕ್ತ ಶ್ರೀ ನಟರಾಜ ಪ್ರತಿಷ್ಠಾನ ಸಂಸ್ಥೆಯಿಂದ ನಗರದಲ್ಲಿ ಶನಿವಾರ ‘ಮಾದರಿ ದಂಡಿಯಾತ್ರೆ’ ನಡೆಯಿತು. ನೂರಾರು ವಿದ್ಯಾರ್ಥಿನಿಯರು ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ದಂಡಿಯಾತ್ರೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸರಸ್ವತಿ ವಿಷ್ಣು ಕೋಸಂದರ್ ಚಾಲನೆ ನೀಡಿದರು. ಮಾದರಿ ದಂಡಿ ಯಾತ್ರೆಯಲ್ಲಿ ಗಾಂಧೀಜಿ ವೇಷಧಾರಿಯಾಗಿ ಗಾಂಧಿವಾದಿ ವೇಮಗಲ್ ಸೋಮಶೇಖರ್ ಪಾಲ್ಗೊಂಡು ಗಮನ ಸೆಳೆದರು.
ನಂತರ ನಟರಾಜ ಕಾಲೇಜು ಆವರಣದಲ್ಲಿ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ, ಮೇಯರ್ ಸುನಂದ ಪಾಲನೇತ್ರ, ಗಾಂಧಿವಾದಿ ವೇಮಗಲ್ ಸೋಮಶೇಖರ್, ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ. ಎಸ್. ಶಿವರಾಜಪ್ಪ, ಕಾಲೇಜು ಪ್ರಾಂಶುಪಾಲೆ ಡಾ.ಎಂ.ಶಾರದಾ ಹಾಗೂ ಇತರರು ಇದ್ದರು.