ಅಗ್ನಿಶಾಮಕ ಠಾಣೆಯ ಅನುದಾನ ವಾಪಸ್

29-dandeli story fire
Published on

ದಾಂಡೇಲಿ: ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ತೆರೆಯುವ ಸಲುವಾಗಿ ಮಂಜೂರಾಗಿದ್ದ ಅನುದಾನ ಸೂಕ್ತ ಜಾಗ ಸಿಗದ ಕಾರಣ ವಾಪಸಾಗಿದೆ. ಇದರಿಂದ ದಾಂಡೇಲಿ ನಗರಸಭೆಯಾದರೂ ಅಗ್ನಿಶಾಮಕ ಠಾಣೆ ಇಲ್ಲದಿರುವ ಕೊರಗು ಹಾಗೇ ಉಳಿಯುವಂತಾಗಿದೆ.
ದಾಂಡೇಲಿ ತಾಲೂಕು ೋಷಣೆ ಯಾಗಿ 6 ವರ್ಷ ಕಳೆದಿವೆ. ನಗರಸಭೆ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾರಿಕಾ ನಗರ ಎಂದು ದಾಂಡೇಲಿ ಗುರುತಿಸಿ ಕೊಂಡಿದೆ. ಬಹುಮಹಡಿ ಕಟ್ಟಡಗಳು, ಪ್ರವಾಸೋದ್ಯಮಕ್ಕಾಗಿ ಆಗಮಿಸುವ ಜನರೂ ಸಾಕಷ್ಟಿದ್ದಾರೆ. ಆದರೂ ಇದುವರೆಗೂ ಒಂದು ಸರ್ಕಾರಿ ಅಗ್ನಿಶಾಮಕ ಠಾಣೆ ಇಲ್ಲ. ಅಗ್ನಿ ಅವಘಡ ಸಂಭವಿಸಿದರೆ ಹಳಿಯಾಳ ಅಥವಾ ಜೊಯಿಡಾದಿಂದ ಅಗ್ನಿಶಾಮಕ ವಾಹನಗಳು ಆಗಮಿಸಬೇಕಿದೆ. ಹಳಿಯಾಳದಿಂದ ದಾಂಡೇಲಿಗೆ 22 ಕಿಮೀ ದೂರವಿದ್ದು, ಜೊಯಿಡಾದಿಂದ ದಾಂಡೇಲಿ 24 ಕಿಮೀ ದೂರವಿದೆ. ಈ ಎರಡೂ ಕಡೆಯಿಂದ ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪಲು ಕನಿಷ್ಠ 20 ನಿಮಿಷ ಕಾಲಾವಕಾಶ ಬೇಕು. ಅಷ್ಟು ಹೊತ್ತಿಗೆ ಬೆಂಕಿ ತಾನು ಹಿಡಿದ ಮನೆ, ಹೊಲ ಅಥವಾ ಅಂಗಡಿಯನ್ನು ಬೂದಿ ಮಾಡಿರುತ್ತದೆ.
ಜಾಗ ನೀಡಲು ವಿಳಂಬ: ಇದನ್ನು ಗಮನಿಸಿ ಅಗ್ನಿಶಾಮಕ ಇಲಾಖೆ ಹೊಸ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಿತ್ತು. ಅದಕ್ಕಾಗಿ ಮೂರು ರ್ಷಗಳ ಹಿಂದೆಯೇ ಸುಮಾರು 3 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಆದರೆ, ಠಾಣೆ ನಿರ್ಮಾಣಕ್ಕೆ ಸೂಕ್ತ ಜಾಗ ದೊರೆಯದ ಕಾರಣ ಅನುದಾನ ವಾಪಸಾಗಿದೆ. ಅದನ್ನು ಹೊನ್ನಾವರಕ್ಕೆ ಬಳಸುವ ಸಾಧ್ಯತೆಯೂ ಇದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಠಾಣೆ, ಸಿಬ್ಬಂದಿ ವಸತಿ ಸಮುಚ್ಚಯ ಎಲ್ಲ ಸೇರಿ 2 ಎಕರೆ ಜಾಗ ಬೇಕು. ನಗರಸಭೆ ಅಂಬೇವಾಡಿಯಲ್ಲಿ 1 ಎಕರೆ ಜಾಗವನ್ನು ಅಗ್ನಿಶಾಮಕ ದಳಕ್ಕೆ ನೀಡಲು ಗುರುತಿಸಿತ್ತು. ಆದರೆ, ಅಲ್ಲಿ ಸಾಕಷ್ಟು ಮರಗಳಿರುವುದರಿಂದ ಅದನ್ನು ಕಡಿಯಲು ಮತ್ತೆ ಅರಣ್ಯ ಇಲಾಖೆ ಅನುಮತಿ ಬೇಕಿದೆ. ಹಾಗಾಗಿ, ಜಾಗ ಹುಡುಕುವ ಕಾರ್ಯ ಇನ್ನೂ ನಡೆದೇ ಇದೆ. ದಾಂಡೇಲಿ ವೆಸ್ಟ್‌ಕೋಸ್ಟ್
ಪೇಪರ್ ಮಿಲ್‌ನಲ್ಲಿ ಅಗ್ನಿಶಾಮಕ ವ್ಯವಸ್ಥೆ ಇದೆ. ತುರ್ತು ಸಂದರ್ಭಗಳಿಗೆ ವಾಹನವನ್ನು ಒದಗಿಸಲಾಗುತ್ತಿದೆ. ಆದರೆ, ಇನ್ಶುರೆನ್ಸ್, ಸರ್ಕಾರದ ಪರಿಹಾರ ಪಡೆಯಲು ಖಾಸಗಿಯವರು ಮಾಡಿದ ಪಂಚನಾಮೆ ಅರ್ಹವಲ್ಲ. ಹಾಗಾಗಿ, ಇಲ್ಲಿ ಕಟ್ಟಡ ಅಥವಾ ಹೊಲಗಳಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಪರಿಹಾರ ಸಿಗುವುದೇ ಇಲ್ಲ.

ದಾಂಡೇಲಿ ಯಲ್ಲಿ ನಗರಸಭೆ ವತಿಯಿಂದ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಸ್ಥಳ ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದು, ಆದಷ್ಟು ಬೇಗನೆ ಅಧಿಕೃತವಾಗಿ ಜಾಗ ಹಸ್ತಾಂತರದ ಕಾರ್ಯವನ್ನು ಜಿಲ್ಲೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪೂರ್ಣಗೊಳಿಸಲಾಗುವುದು. ಬಹುದಿನಗಳ ಜನರ ಬೇಡಿಕೆ ಈಡೇರಿಸುವುದು ಸ್ಥಳೀಯ ನಗರಸಭೆ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿ ಆಗಿದೆ.ಅನಿಲ ನಾಯ್ಕರ್ ದಾಂಡೇಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ

ಎಚ್ಚರಿಸಿದ್ದ ವಿಜಯವಾಣಿ ಪತ್ರಿಕೆ
ದಾಂಡೇಲಿಗೆ ಅಗ್ನಿಶಾಮಕ ಠಾಣೆ ಬೇಕಿರುವ ಬಗ್ಗೆ, ‘ವಿಜಯವಾಣಿ’ 2022 ರ ನವೆಂಬರ್ 7 ರಂದು ‘ಅಗ್ನಿಶಾಮಕ ಠಾಣೆ ಆರಂಭ ಯಾವಾಗ? ವಾಪಸ್ ಹೋಗದಿರಲಿ ಅನುದಾನ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅನುದಾನ ವಾಪಸಾಗುವ ಆತಂಕದ ಬಗ್ಗೆ ಎಚ್ಚರಿಸಲಾಗಿತ್ತು. ಆದರೂ ಆಡಳಿತ ಎಚ್ಚೆತ್ತುಕೊಳ್ಳದ ಕಾರಣ ಅನುದಾನ ವಾಪಸಾಗಿದೆ. ಅಗ್ನಿಶಾಮಕ ಠಾಣೆ ಕನಸಾಗಿಯೇ ಉಳಿಯುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net