ನೃತ್ಯ ಶಾಲೆಗಳಿಗೆ ಸಹಕಾರ ಅಗತ್ಯ

26 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನೃತ್ಯ ಕಲೆಯ ಅಪೂರ್ವ ಅಂಗಳದಲ್ಲಿ 69 ವಸಂತಗಳನ್ನು ಪೂರೈಸಿ ಸಾರ್ಥಕ ಹೆಜ್ಜೆಗಳನ್ನು ಮೂಡಿಸಿರುವ ಅಪರೂಪದ ಕಲಾ ಶಾಲೆ ಉಪಾಧ್ಯೆ ನೃತ್ಯ ವಿಹಾರ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಉಪಾಧ್ಯೆ ನೃತ್ಯ ವಿಹಾರದ ಸಂಗೀತ ನೃತ್ಯ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಪುಟ್ಟ ಮಕ್ಕಳಿಂದ ದೊಡ್ಡ ಕಲಾವಿದರ ತನಕ ಎಲ್ಲರೂ ಆಸ್ಥೆಯಿಂದ ನೃತ್ಯ ವಿಹಾರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇಂತಹ ನೃತ್ಯ ಶಾಲೆಗಳಿಗೆ ಸಹಕಾರದ ಊರುಗೋಲಾಗಿ ನಿಲ್ಲಬೇಕಿರುವುದು ಇಂದಿನ ಅಗತ್ಯವಾಗಿದೆ ಎಂದರು.
ಶಂಕರ ಹಲಗತ್ತಿ, ಡಾ. ಕೃಷ್ಣಮೂರ್ತಿ ಮಾತನಾಡಿದರು. ಉಪಾಧ್ಯೆ ನೃತ್ಯವಿಹಾರದ ಅಧ್ಯಕ್ಷ ವಿದ್ವಾನ್ ನಟರಾಜ ಉಪಾಧ್ಯೆ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ಪ್ರಮೋದಾ ಉಪಾಧ್ಯೆ, ಇತರರು ಇದ್ದರು.
ನಂತರ ಉಪಾಧ್ಯೆ ನೃತ್ಯವಿಹಾರದ 80 ಜನ ಮಕ್ಕಳು ನೃತ್ಯಗಳನ್ನು ಪ್ರಸ್ತುತಪಡಿಸಿದರು. ನಟುವಾಂಗದಲ್ಲಿ ವಿದುಷಿ ಕಾವ್ಯ ಸಿದ್ಧಾಪುರ, ಹಾಡುಗಾರಿಕೆಯಲ್ಲಿ ವಿದುಷಿ ನವಮಿ ಉಪಾಧ್ಯೆ, ಮೃದಂಗದಲ್ಲಿ ಪಂಚಮ ಉಪಾಧ್ಯೆ ಮತ್ತು ವಯಲಿನ್‌ನಲ್ಲಿ ಶಂಕರ ಕಬಾಡಿ ಸಾಥ್ ನೀಡಿದರು. ಮಾಯಾ ಚಿಕ್ಕೆರೂರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net