

ಗೋಣಿಕೊಪ್ಪಲು: ಶ್ರೀಕಾವೇರಿ ದಸರಾ ಸಮಿತಿಯಿಂದ ನಡೆದ ಯುವ ದಸರಾದಲ್ಲಿ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ನೃತ್ಯ ತಂಡಗಳು ಉತ್ತಮ ನೃತ್ಯ ಪ್ರದರ್ಶನ ನೀಡುವ ಮೂಲಕ ಯುವ ದಸರಾದಲ್ಲಿ ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿತು.
ಗೋಣಿಕೊಪ್ಪಲಿನ ಕಾವೇರಿ ಕಲಾ ವೇದಿಕೆಯಲ್ಲಿ ದಸರಾ ಜನೋತ್ಸವದ ಅಂಗವಾಗಿ 7ನೇ ದಿನದ ಕಾರ್ಯಕ್ರಮ ಯುವ ದಸರಾ ಸಮಿತಿ ವತಿಯಿಂದ ಆಯೋಜಿಸಿತ್ತು. ರಾಜ್ಯದ ವಿವಿಧ ಭಾಗದಿಂದ ನೃತ್ಯ ತಂಡಗಳು ಆಗಮಿಸಿ ಉತ್ತಮ ಪ್ರದರ್ಶನ ನೀಡಿದವು.
ತೀವ್ರ ಪೈಪೋಟಿಯಿಂದ ಕೂಡಿದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಡಾನ್ಸ್ ಲ್ಯಾಬ್ ತಂಡ ಪ್ರಥಮ ಸ್ಥಾನ ಪಡೆಯಿತು. ನಾಟ್ಯ ಕಲಾ ಡಾನ್ಸ್ ಇನ್‌ಸ್ಟಿಟ್ಯೂಷನ್ ದ್ವಿತೀಯ ಸ್ಥಾನ ಪಡೆದರೆ ಕಿಂಗ್ಸ್ ಆಫ್ ಕೂರ್ಗ್ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. 24 ತಂಡಗಳು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಯುವ ದಸರಾ ಸಮಿತಿ ಅಧ್ಯಕ್ಷರಾದ ನಾಮೇರ ಅಂಕಿತ್ ಪೊನ್ನಪ್ಪ ಮುಂದಾಳತ್ವದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು.