

ಶೃಂಗೇರಿ: ಶತಮಾನಗಳ ಇತಿಹಾಸ ಇರುವ ನೃತ್ಯಕಲೆ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಸಮಾಜದ ಸುಸಂಸ್ಕೃತೆಗೆ ತನ್ನದೇ ಆದ ಕೊಡುಗೆ ನೀಡಿರುವ ನೃತ್ಯ ಕೇವಲ ಮನೋರಂಜನೆಗೆ ಸೀಮೀತವಾಗಿಲ್ಲ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ನೃತ್ಯ ನಾಟಕ ಸಂಗೀತ ತರಬೇತಿ ಶಾಲೆ ಸಹಯೋಗದೊಂದಿಗೆ ನಾಟ್ಯವೈಭವ ನೃತ್ಯ ಅಕಾಡೆಮಿ ಆಯೋಜಿಸಿದ ರಾಜ್ಯಮಟ್ಟದ ಅಭಿನಯ ಲಹರಿ ನೃತ್ಯೋತ್ಸವಂ-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೈಲಾಸದಲ್ಲಿ ಸಾಕ್ಷಾತ್ ಶಿವ ನಟರಾಜನಾಗಿ ನಾಟ್ಯ ಮಾಡುವ ಮೂಲಕ ಕಲೆಯ ಆಧ್ಯಾತ್ಮಿಕ ಸ್ವರೂಪವನ್ನು ಸಾಕ್ಷಾತ್ಕರಿಸಿದ್ದ ಕಾರಣ ನಾಟ್ಯಕಲೆ ಧರ್ಮದ ಅಮೂಲ್ಯ ಭಾಗವಾಗಿದೆ ಎಂದು ತಿಳಿಸಿದರು.
ವೇದ, ಉಪನಿಷತ್ತು ನಮಗೆ ವೇದಾಂತದ ಜ್ಞಾನ ನೀಡುತ್ತದೆ. ಆದರೆ ನಮ್ಮೊಳಗಿನ ಸಾಮಾಜಿಕ ಪ್ರಜ್ಞೆ ಆವಿರ್ಭವಿಸಲು ಸಂಸ್ಕೃತಿ ಪೂರಕವಾಗಿದೆ. ಮನಸ್ಸನ್ನು ನಿಯಂತ್ರಿಸುವ, ಆತ್ಮ ವಿಶ್ವಾಸ ವೃದ್ಧಿಸುವ, ವಿಶಾಲತೆ ಪರಿಮೂಡಿಸುವ ಸಾಂಸ್ಕೃತಿಕ ನೆಲೆಗಟ್ಟಿನ ಅಸ್ತಿತ್ವ ಉಳಿಸಲು ನೃತ್ಯದ ವಿವಿಧ ಪ್ರಕಾರಗಳು ನೀಡಿದ ಕೊಡುಗೆ ಅನನ್ಯ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವ ಸುಮನಾ ಮಸ್ಸುಗಳು ಪ್ರಸ್ತುತ ಅನಿವಾರ್ಯ. ಮಾನವನು ಸಮಾಜಕ್ಕೆ ವಿಮುಖವಾಗಿ ನಡೆದರೆ ಧಾರ್ಮಿಕ ಮೌಲ್ಯಗಳು ಕಡಿಮೆಯಾಗುತ್ತದೆ. ಸಾಹಿತ್ಯ, ಸಂಸ್ಕೃತಿಯಿಂದ ಧಾರ್ಮಿಕ ದೃಷ್ಟಿತ್ವ ಉಳಿಯಲು ಸಾಧ್ಯ. ಕುವೆಂಪು ಬರೆದ ನಾಡಗೀತೆ ಶ್ರೀ ಆದಿಶಂಕರರಿಂದ ಹಿಡಿದು ಸರ್ವರಿಗೂ ಗೌರವ ನೀಡಿದ ಪವಿತ್ರ ಗೀತೆ. ಜನಸಾಮಾನ್ಯರು ಚಲನಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬದಲಾವಣೆಯ ಮನ್ವಂತರ ಜನಸಾಮಾನ್ಯರಿಂದ ಪ್ರಾರಂಭವಾಗಬೇಕು. ಆಗ ಮಾತ್ರ ಆಧ್ಯಾತ್ಮಿಕ ನೆಲೆಗಟ್ಟು ಭದ್ರವಾಗಿರುತ್ತದೆ ಎಂದರು.
ಮಡಿಕೇರಿ,ಮಂಗಳೂರು,ಧಾರವಾಡ,ಹುಬ್ಬಳ್ಳಿ ಮುಂತಾದ ಕಡೆಯ ಕಲಾವಿದರು ನೃತ್ಯ ನಡೆಸಿಕೊಟ್ಟರು. ರೋಟರಿ ಅಧ್ಯಕ್ಷ ಕೆ.ಸಿ.ನಾಗೇಶ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್,ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಅಕಾಡೆಮಿ ಮುಖ್ಯಸ್ಥೆ ಸುನೀತಾ ನವೀನ್ ಗೌಡ, ಜೆಸಿಐ ಕಾರ್ಯದರ್ಶಿ ರಮೇಶ್ ಶೂನ್ಯ, ಮೆಣಸೆ ಗ್ರಾಪಂ ಸದಸ್ಯ ತ್ರಿಮೂರ್ತಿ ಹಾಜರಿದ್ದರು.