

ಶಿವಮೊಗ್ಗ: ಸಹಚೇತನ ನಾಟ್ಯಾಲಯವು ನಗರ ಕುವೆಂಪು ರಂಗಮಂದಿರದಲ್ಲಿ 13ನೇ ವರ್ಷದ ನಾಟ್ಯಾರಾಧನಾ ರಾಷ್ಟ್ರೀಯ ನೃತ್ಯ ಮಹೋತ್ಸವ ಏರ್ಪಡಿಸಿದೆ. ಆ.30ರಿಂದ ಸೆ.1ರವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ನೃತ್ಯ ಕಾರ್ಯಕ್ರಮಗಳು ಆರಂಭವಾಗಲಿವೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಚೇತನದ ನೃತ್ಯಗುರು ಸಹನಾ ಚೇತನ್, ಮೊದಲ ದಿನ ನಮ್ಮ ನಾಟ್ಯಾಲಯದ ಎಲ್ಲ 175 ಮಕ್ಕಳು ರುದ್ರಾಭಿಸಾರ - ನಟರಾಜನ ವಿಶೇಷ ಕೀರ್ತನೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮೂರು ವರ್ಷದಿಂದ ಆರಂಭವಾಗಿ 40 ವರ್ಷದವರೂ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
31ರಂದು ನೃತ್ಯಗುರು ಸಹನಾ ಚೇತನ್ ಲಲಿತಾರ್ಣವ ಆದಿಶಂಕರಾಚಾರ್ಯರು ರಚಿಸಿರುವ ಲಲಿತಾ ಪಂಚಾಷ್ಠಕಮ್ ಜತೆಗೆ ಕಾಮಾಕ್ಷಿ ಸುಪ್ರಭಾತಮ್ ಹಾಗೂ ದೇವಿ ಲಲಿತೆಯ ಕೀರ್ತನೆಗಳನ್ನು ಏಕವ್ಯಕ್ತಿ ನೃತ್ಯರೂಪಕದ ಮೂಲಕ ಪ್ರಸ್ತುತ ಪಡಿಸಲಿದ್ದಾರೆ. ಬಳಿಕ ನಾಟ್ಯಾಲಯದ ಹಿರಿಯ ವಿದ್ಯಾರ್ಥಿಗಳು ಹರಿದಾಸಕೂಟ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ.
ಸೆ.1ರಂದು ಚೆನ್ನೈನ ಶ್ರೀದೇವಿ ನೃತ್ಯಾಲಯದ ಕಲಾವಿದರು ವಿಭಿನ್ನ ರೀತಿಯಲ್ಲಿ ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ಬಳಿಕ ಮಹಾರಾಷ್ಟ್ರದ ಪುರಸ್ಕಾರ್ ಡಾನ್ಸ್ ಅಕಾಡೆಮಿಯವರು ಲಾವಣಿ, ಕೋಳಿ ನೃತ್ಯ, ಗೋಂಡಾಲ್, ಗಾವಾಲನ್ ಮುಂರಾದ ನೃತ್ಯಗಳನ್ನು ಪ್ರದರ್ಶಿಸುವರು ಎಂದು ಸಹನಾ ಚೇತನ್ ಹೇಳಿದರು.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆ.30ರಂದು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಚೇತನದ ಅಧ್ಯಕ್ಷ ಎನ್.ಆರ್.ಪ್ರಕಾಶ್ (ಆಚಿ) ಉಪಸ್ಥಿತರಿರಲಿದ್ದಾರೆ. ಸೆ.1ರಂದು ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅತಿಥಿಗಳಾಗಿ ಪಾಲ್ಗೊಂಡು ಚೆನ್ನೈ ಹಾಗೂ ಮಹಾರಾಷ್ಟ್ರದ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದರು.
ಮೂರು ದಿನಗಳ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರವಿರುತ್ತದೆ. ತೀರ್ಥಹಳ್ಳಿಯ ಶಿವಕುಮಾರ್ ವೇದಿಕೆಯ ಬೆಳಕು ನಿರ್ವಹಣೆ ಮಾಡಲಿದ್ದಾರೆ. ಪುರುಷೋತ್ತಮ ತಲವಾಟ ಪ್ರಸಾಧನ, ಮಹೇಶ್ ಆರ್ಟ್ಸ್‌ನವರ ರಂಗಸಜ್ಜಿಕೆ, ಉಮಾ ವೆಂಕಟೇಶ್ ವೇಷಭೂಷಣಕ್ಕೆ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.
ಸಹಚೇತನದ ಪ್ರಮುಖರಾದ ಎಸ್.ಚೇತನ್, ಡಾ.ನಾಗಮಣಿ, ಆನಂದರಾಮ್, ವಿನಯ್ ಶಿವಮೊಗ್ಗ, ಮಾಲತೇಶ್, ಸಿಂಧುಶ್ರೀ ಅಡಿಗ, ಆರ್.ರವೀನಾ, ಡಿ.ಎ.ಸೇಜಲ್ ಸುದ್ದಿಗೋಷ್ಠಿಯಲ್ಲಿದ್ದರು.