ಅ.25 ರಂದು ರಾಷ್ಟ್ರೀಯ ನೃತ್ಯ ಸ್ಪರ್ಧೆ ನೃತ್ಯೋತ್ಸವ 2024

Dane
Published on

25ರಂದು ರಾಷ್ಟ್ರೀಯ ನೃತ್ಯ ಸ್ಪರ್ಧೆ ನೃತ್ಯೋತ್ಸವ

ಮಂಗಳೂರು : ಶ್ರೀದೇವಿ ನೃತ್ಯ ಕೇಂದ್ರ ಮಂಗಳೂರು ಇದರ ವತಿಯಿಂದ ನಾಟ್ಯ ಇತಿಹಾಸದ ಪಿತಾಮಹರೆಂದೇ ಪ್ರಸಿದ್ಧರಾದ ಪ್ರೊ.ಮೋಹನ್ ಖೋಕರ್ ಅವರ ಶತಮಾನೋತ್ಸವ ಆಚರಣೆ, ಪ್ರಶಸ್ತಿ ಪ್ರದಾನ, ಹಾಗೂ ನೃತ್ಯೋತ್ಸವ 2024 ರಾಷ್ಟ್ರೀಯ ನೃತ್ಯ ಸ್ಪರ್ಧೆ
ಕಾರ್ಯಕ್ರಮ ಅ.25 ರಂದು ಬೆಳಗ್ಗೆ ನಗರದ ಡಾನ್‌ಬಾಸ್ಕೊ ಸಭಾಂಗಣದಲ್ಲಿ ನಡೆಯಲಿದೆ.
ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆಯನ್ನು ಇತಿಹಾಸ ತಜ್ಞ ಪ್ರೊ.ಆಶಿಷ್ ಖೋಕರ್ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಆರತಿ ಎಚ್. ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಯಂಕಾಲ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ನೃತ್ಯ ಗುರು ದಿ.ಜಯಲಕ್ಷ್ಮಿ ಆಳ್ವ ಅವರ ಸ್ಮರಣಾರ್ಥ ನೀಡುವ ‘ಜಯ ಕಲಾ ಪ್ರಶಸ್ತಿಯನ್ನು ನಾಟ್ಯ ಕ್ಷೇತ್ರದ ಸೇವೆಗಾಗಿ ವಾರಣಾಸಿಯ ಕಥಕ್ ಕಲಾವಿದೆ ಡಾ.ವಿಧಿ ನಗರ್ ಅವರಿಗೆ ಪ್ರದಾನ ಮಾಡಲಾಗುವುದು. ಗುರು ಉಳ್ಳಾಲ ಮೋಹನ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ
ಲಕ್ಷ್ಮೀ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ನಾಟ್ಯ ಜಗತ್ತಿಗೆ ಪ್ರೊ.ಮೋಹನ್ ಖೋಕರ್ ಅವರ ಕೊಡುಗೆಯನ್ನು ಬಿಂಬಿಸುವ ಕಿರುಚಿತ್ರವನ್ನು ಇದೇ ಸಂದರ್ಭ ಪ್ರದರ್ಶಿಸಲಾಗುವುದೆಂದು ಅವರು ತಿಳಿಸಿದರು.
ರಾಷ್ಟ್ರ ಮಟ್ಟದ ನೃತ್ಯ ಸ್ಪರ್ಧೆ ‘ಪ್ರತಿಭಾ ಪ್ರದರ್ಶನ’ದಲ್ಲಿ ದೇಶದ ವಿವಿಧ ರಾಜ್ಯಗಳಿಂದ 30 ಸ್ಪರ್ಧಾಳುಗಳು ಭಾಗವಹಿಸಲಿದ್ದು, ವಿಜೇತರಿಗೆ ಯುವಕಲಾ ಪ್ರಶಸ್ತಿ ನೀಡಲಾಗುವುದು. ‘ಕೃಷ್ಣ, ಪ್ರಾಣ’ ಎಂಬ ಭಕ್ತಿ ಪ್ರಧಾನ ಸಂಗೀತ ನೃತ್ಯ ರೂಪಕವನ್ನು ಶ್ರೀ ದೇವಿ ನೃತ್ಯಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ ಎಂದು ಡಾ.ಆರತಿ .ಎಚ್.ಶೆಟ್ಟಿ ತಿಳಿಸಿದರು.
ಕಸಾಪ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶ್ರೀದೇವಿ ನೃತ್ಯ ಕೇಂದ್ರದ ನಿರ್ದೇಶಕರಾದ ಹರೀಶ್ ಶೆಟ್ಟಿ, ಸಾತ್ವಿಕಾ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net