

ವಿಜಯಪುರ: ವಿಶ್ವವನ್ನೇ ಹೆಮ್ಮಾರಿಯಂತೆ ಕಾಡುತ್ತಿರುವ ಕರೊನಾ ವೈರಸ್ ತಡೆಗಟ್ಟಲು ಎಚ್ಚರೂ ಎಚ್ಚೆತ್ತುಕೊಳ್ಳಬೇಕು. ಇದು ಭಾರತದಲ್ಲಿ ನಿಯಂತ್ರಣಕ್ಕೆ ಬರಬೇಕೆಂದರೆ ಖಂಡಿತವಾಗಿ 21 ದಿನಗಳ ಲಾಕ್‌ಡೌನ್ ಅನ್ನು ಎಲ್ಲರೂ ಪಾಲಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗದರ್ಶನ ಪಾಲಿಸಿ ಎಂದು ಇಂಗ್ಲೆಂಡ್‌ನಲ್ಲಿ ನೆಲೆಸಿರುವ ವಿಜಯಪುರ ಮೂಲಕ ವೈದ್ಯರಾದ ಡಾ. ದಾನಯ್ಯ ಮಠಪತಿ ಭಾರತೀಯರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ ಫೆಬ್ರವರಿ ಕೊನೆ ವಾರದಲ್ಲಿ ಇಂಗ್ಲೆಂಡ್‌ಗೆ ತೆರಳಿದ್ದ ವೈದ್ಯ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ಎಮರ್ಜೆನ್ಸಿ ವಿಚಾರಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್‌ನಿಂದಲೇ ವಾಟ್ಸಾಪ್ ಮೂಲಕ ವಿಡಿಯೋ ಮಾಡಿ ಇಲ್ಲಿಯ ಜನರಿಗೆ ಕರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ.
ಕರೊನಾದಿಂದಾಗಿ ಇಂಗ್ಲೆಂಡ್‌ನ ಪರಿಸ್ಥಿತಿ ಕಳೆದ ಮೂರು ವಾರಗಳಲ್ಲಿ ಭಯಾನಕವಾಗಿದೆ. ಒಂದೊಂದು ದಿನಕ್ಕೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಗಳಿಗೆ ಮಿತಿಮೀರಿ ರೋಗಿಗಳು ದಾಖಲಾಗುತ್ತಿದ್ದಾರೆ. ಮುಂದುವರಿದ ದೇಶಗಳಾದ ಇಂಗ್ಲೆಂಡ್, ಯೂರೋಪ್ ಹಾಗೂ ಅಮೆರಿಕಾದಲ್ಲೇ ಕರೊನಾ ಆವರಿಸಿಬಿಟ್ಟಿದೆ. ಇಲ್ಲಿಯೇ ರೋಗದ ಎಫೆಕ್ಟ್ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿಯವರ ಅಹಂಕಾರ ಹಾಗೂ ನಿರ್ಲಕ್ಷೃ ಭಾವವೇ ಕಾರಣ ಎಂದರೂ ತಪ್ಪಿಲ್ಲ. ಫೆಬ್ರವರಿ ಕೊನೆ ವಾರದಲ್ಲಿ ನಾನು ಇಂಗ್ಲೆಂಡ್‌ಗೆ ಬಂದಾಗ ಇಲ್ಲಿನ ವಿಮಾನ ನಿಲ್ದಾಣಗಳಲ್ಲಿ ಎಲ್ಲೂ ಸ್ಕ್ರೀನಿಂಗ್ ಅಥವಾ ಕರೊನಾ ಪತ್ತೆ ಹಚ್ಚುವ ಕೆಲಸ ಮಾಡಲಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಎಲ್ಲಡೆ ಇದು ಆವರಿಸಿ ಮೂರನೇ ಹಂತಕ್ಕೆ ತಲುಪಿತ್ತು. ಈಗ ಎಲ್ಲರೂ ಪರಿತಪಿಸುವಂತಾಗಿದೆ. ಹೀಗಾಗಿ ಭಾರತದಲ್ಲಿ ಈ ರೀತಿ ಹಬ್ಬಿದರೆ ನಿಯಂತ್ರಣ ತುಂಬಾಕಷ್ಟ. ಹೀಗಾಗಿ ಎಲ್ಲರೂ ಲಾಕ್‌ಡೌನ್ ಅನುಸರಿಸುವ ಮೂಲಕ ಕರೊನಾ ಹಬ್ಬುವ ಸರಪಳಿಯನ್ನು ನಿಯಂತ್ರಿಸಬೇಕು ಎಂಬುದೇ ನನ್ನ ಮಹದಾಸೆ. ಎಚ್ಚೆತ್ತುಕೊಂಡು ಎಲ್ಲರೂ ಸಹಕರಿಸಿ ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ.