

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಈ ಬಾರಿ ಜಿಲ್ಲೆಗೆ ವರ್ಷಧಾರೆ ಹರ್ಷ ತಂದಿದೆ. ಇದರಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಇದರ ಮಧ್ಯೆ ಜಲಾಶಯಗಳಿಗೆ ಜೀವಕಳೆ ಬಂದಿದ್ದು, ಮಳೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಜನರು ನೀರಿನ ಚಿಂತೆ ಬಿಟ್ಟು ನಿಶ್ಚಿಂತೆಯಿಂದ ಇರಬಹುದಾಗಿದೆ.
ಜಿಲ್ಲೆಯಲ್ಲಿ ಸಪ್ತ ನದಿಗಳು ಹರಿದಿದ್ದರೂ ಕುಡಿಯುವ ನೀರು, ನೀರಾವರಿ, ಕೈಗಾರಿಕೆಗಳಿಗೆ ಘಟಪ್ರಭಾ, ಮಲಪ್ರಭಾ ನದಿಗಳಿಗೆ ನಿರ್ಮಿಸಿರುವ ಜಲಾಶಯಗಳೇ ಮೂಲಾಧಾರವಾಗಿವೆ. ರಕ್ಕಸಕೊಪ್ಪ, ಮಾರ್ಕಂಡೇಯ(ಶಿರೂರ) ಜಲಾಶಯಗಳು ಭರ್ತಿಯಾಗಿದ್ದು, ಹಿಡಕಲ್ ಡ್ಯಾಂ, ನವೀಲು ತೀರ್ಥ ಡ್ಯಾಂಗಳು ಭರ್ತಿಗೆ ದಿನಗಣನೆ ಆರಂಭವಾಗಿವೆ. ಇದು ಜನದಲ್ಲಿ ಮಂದಹಾಸ ಮೂಡಿಸಿದೆ.
ಹಿಡಕಲ್ ಡ್ಯಾಂ 6 ಟಿಎಂಸಿ ಬಾಕಿ:ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದ ಬಳಿ ಘಟಪ್ರಭಾ ನದಿಗೆ ಹಿಡಕಲ್‌ನಲ್ಲಿ ನಿರ್ಮಿಸಿರುವ ರಾಜಾಲಖಮಗೌಡ ಜಲಾಶಯ 51 ಟಿಎಂಸಿ ಸಾಮರ್ಥ್ಯ ಹೊಂದಿದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಜನ, ಜಾನುವಾರು ಹಾಗೂ ನೀರಾವರಿಗೆ ಆಸರೆಯಾಗಿದೆ. ಈ ಜಲಾಶಯದಿಂದಲೇ ಎರಡು ಜಿಲ್ಲೆಗಳ 3.56 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ನೀಡಲಾಗುತ್ತಿದೆ. ಕುಡಿಯುವುದಕ್ಕಾಗಿ ಐದು ಟಿಎಂಸಿ ನೀರು ಹಾಗೂ ಕೈಗಾರಿಕೆಗಳಿಗೆ 4 ಟಿಎಂಸಿ ನೀರು ಮೀಸಲಿಡಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಹಿಡಕಲ್ ಜಲಾಶಯಕ್ಕೆ 15,782 ಕ್ಯೂಸೆಕ್ ಒಳಹರಿವು ಇದೆ. ಭರ್ತಿಗೆ 6 ಟಿಎಂಸಿ ಮಾತ್ರ ಬಾಕಿ ಇದೆ. ಇದೇ ರೀತಿ ಮಳೆಯಾದರೆ ಒಂದು ವಾರದಲ್ಲಿ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವಿಲು ತೀರ್ಥ ಡ್ಯಾಂ ಭರ್ತಿಗೆ 16 ಅಡಿ :ಸವದತ್ತಿ ತಾಲೂಕಿನ ನವಿಲುತೀರ್ಥ ಬಳಿ ನಿರ್ಮಿಸಿರುವ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 37.73 ಟಿಎಂಸಿ ಸಾಮರ್ಥ್ಯದ ರೇಣುಕಾಸಾಗರ ಜಲಾಶಯ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಿಗೆ ಕುಡಿಯಲು, ನೀರಾವರಿಗೆ ಆಸರೆಯಾಗಿದೆ. ಪಶ್ಚಿಮಘಟ್ಟ, ಖಾನಾಪುರ ತಾಲೂಕಿನಲ್ಲಿ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯದಲ್ಲೂ ನೀರಿನ ಸಂಗ್ರಹಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸದ್ಯ ಜಲಾಶಯ ಭರ್ತಿಗೆ 16 ಅಡಿ (10 ಟಿಎಂಸಿ) ಬಾಕಿ ಉಳಿದಿದೆ. ಇದೇ ರೀತಿ ಮಳೆ ಮುಂದುವರಿದರೆ ನಾಲ್ಕು ವಾರದಲ್ಲಿ ತುಂಬುವ ಸಾಧ್ಯ ಇದೆ ಎಂದು ಜಲಾಶಯ ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಕಸಕೊಪ್ಪ ಜಲಾಶಯ ಭರ್ತಿ:ನೆರೆಯ ಮಹಾರಾಷ್ಟ್ರ ಗಡಿಭಾಗಕ್ಕೆ ಹೊಂದಿಕೊಂಡಿರುವ ಹಾಗೂ ಬೆಳಗಾವಿ ಮಹಾನಗರದ ಅರ್ಧ ಭಾಗಕ್ಕೆ ಕುಡಿಯುವ ನೀರು ಪೂರೈಸುವ 2,476 ಅಡಿ ಸಾಮರ್ಥ್ಯದ ರಕ್ಕಸಕೊಪ್ಪ ಜಲಾಶಯ ಭರ್ತಿಯಾಗಿದೆ. ಹುಕ್ಕೇರಿ ಮತ್ತು ಗೋಕಾಕ ತಾಲೂಕಿನ ಕೃಷಿ ಭೂಮಿಗಳಿಗೆ ನೀರು ಹರಿಸುವ ಮಾರ್ಕಂಡೇಯ ನದಿಯ ಶಿರೂರ ಜಲಾಶಯವೂ ತುಂಬಿ ಹರಿಯುತ್ತಿರುವುದು ಜಿಲ್ಲೆಯ ಕೃಷಿಕರಲ್ಲಿ ನೆಮ್ಮದಿ ಮೂಡಿಸಿದೆ. ಹೀಗಾಗಿ ಈ ಬಾರಿ ಬೆಳಗಾವಿ ನಗರ ಜನತೆಗೆ ನೀರಿನ ಅಭಾವ ಉಂಟಾಗುವ ಸಾಧ್ಯತೆ ತೀರಾ ವಿರಳ ಎನ್ನಲಾಗಿದೆ.
ಹೂಳಿನಿಂದ ಸಂಗ್ರಹ ಸಾಮಥ್ಯ ಕ್ಷೀಣ: ರಾಜಾಲಖಮಗೌಡ, ರೇಣುಕಾಸಾಗರ ಜಲಾಶಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೂಳು ತುಂಬಿದೆ. ಹೀಗಾಗಿಯೇ ಪ್ರತಿ ವರ್ಷ ಡ್ಯಾಂಗಳು ಬೇಗ ತುಂಬಿ ಬೇಗ ಖಾಲಿಯಾಗುತ್ತಿವೆ. ಹಿಡಕಲ್ ಡ್ಯಾಂನಲ್ಲಿ 4 ಟಿಎಂಸಿ, ಮಲಪ್ರಭಾ ಜಲಾಶಯದಲ್ಲಿ 2.20 ಟಿಎಂಸಿ ಹೂಳು ತುಂಬಿದೆ. ಹೂಳು ತೆಗೆಯದಿರುವುದರಿಂದ ಡ್ಯಾಂ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ಶೀಘ್ರ ಭರ್ತಿಯಾಗಲಿವೆ. ಈ ಜಲಾಶಯಗಳು ನಿರ್ಮಾಣಗೊಂಡ ದಿನದಿಂದ ಇಲ್ಲಿಯವರೆಗೆ ಹೂಳು ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಈ ವರ್ಷ ಹೂಳೆತ್ತಲು ಯೋಜನೆ ರೂಪಿಸಲು ಸೂಚಿಸಿದ್ದೇನೆ. ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ