

ರಾಮನಗರ: ನಗರದ ರಸ್ತೆಗಳು ಮೃತ್ಯುಕೂಪಗಳಾಗಿವೆ. ಪ್ರತಿಷ್ಠಿತ ಬಡಾವಣೆಗಳು ಸೇರಿ ಬಹುತೇಕ ಕಡೆಗಳಲ್ಲಿ ಬಡಾವಣೆಗಳನ್ನು ಸಂರ್ಪಸುವ ರಸ್ತೆಗಳು ಹಾಗೂ ಗ್ರಾಮೀಣ ಭಾಗವನ್ನು ಸಂರ್ಪಸುವ ರಸ್ತೆಗಳು ಗುಂಡಿ ಬಿದ್ದಿದ್ದು, ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ರೋಟರಿ ಸರ್ಕಲ್ ವೃತ್ತದಿಂದ ಎಂ.ಎಚ್. ಶಾಲೆಗೆ ತೆರಳುವ ಮಾರ್ಗ ಸಂಪೂರ್ಣ ಹಾಳಾಗಿದೆ. ವಿವಿಧ ಕಾಮಗಾರಿಗಳಿಗಾಗಿ ತೆಗೆದ ಗುಂಡಿಗಳನ್ನು ಮುಚ್ಚದಿರುವುದು ಹಾಗೂ ರಸ್ತೆಗೆ ಡಾಂಬರು ಹಾಕದಿರುವುದರಿಂದ ಎಲ್ಲೆಂದರಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಮಳೆ ಬಂದರೆ ಸಂಚರಿಸಲು ಸಾಧ್ಯವಾಗದ ಸ್ಥಿತಿ ನಿರ್ವಣವಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ವಿವೇಕಾನಂದ ನಗರ ಬಡಾವಣೆಯ ಪ್ರಮುಖ ರಸ್ತೆಯ ಕಥೆಯಂತೂ ಹೇಳತೀರದಾಗಿದೆ. ದೊಡ್ಡ ಗುಂಡಿಗಳು ನಿರ್ವಣವಾಗಿದ್ದರೂ ದುರಸ್ತಿ ಕೆಲಸಕ್ಕೆ ನಗರಸಭೆ ಮುಂದಾಗಿಲ್ಲ. ಅಲ್ಲದೆ, ಈ ಬಡಾವಣೆಯಲ್ಲಿ ರಾಜಕೀಯ ವ್ಯಕ್ತಿಗಳು ಹಾಗೂ ಜಿಲ್ಲೆಯ ಪ್ರಮುಖರ ನಿವಾಸಗಳಿದ್ದರೂ ಅವರೂ ಸಹ ರಸ್ತೆ ದುಸ್ಥಿತಿ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯುತ್ತಿಲ್ಲ. ಮತ್ತೊಂದೆಡೆ ರಾಮದೇವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ವಿಜಯನಗರ ಬಳಿ ಕಳೆದ ಕೆಲವು ತಿಂಗಳ ಹಿಂದಷ್ಟೇ ರಸ್ತೆಗೆ ಡಾಂಬರು ಹಾಕಿದ್ದರೂ, ಮತ್ತೆ ದೊಡ್ಡ ಹೊಂಡಗಳು ನಿರ್ವಣವಾಗಿವೆ. ಇದು ಕಳಪೆ ಕಾಮಗಾರಿ ಎನ್ನುವುದು ಸಾರ್ವಜನಿಕ ಆರೋಪವಾಗಿದೆ.
ವಾಹನ ಸವಾರರಿಗೆ ಅಪಾಯ: ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿರುವುದು ವಾಹನ ಸವಾರರಿಗೆ ಚಾಲನೆ ದೊಡ್ಡ ಸವಾಲಾಗಿದೆ. ಒಂದು ಗುಂಡಿ ತಪ್ಪಿಸಲು ಮತ್ತೊಂದು ಗುಂಡಿಗೆ ವಾಹನ ಇಳಿಸಬೇಕಾದ ಅನಿವಾರ್ಯತೆ ಇದೆ. ಪ್ರತಿ ದಿನ ಒಂದಿಲ್ಲೊಂದು ಬೈಕ್ಗಳು ಗುಂಡಿಗೆ ಬಿದ್ದು, ಸವಾರರು ಗಾಯಗೊಳ್ಳುತ್ತಿದ್ದಾರೆ.
ರಸ್ತೆ ಅಗೆತ ತಪ್ಪಿಸಿ
ರಾಮನಗರದ ಬಹುತೇಕ ರಸ್ತೆಗಳನ್ನು ಎಲ್ಲೆಂದರಲ್ಲಿ ಅಗೆದಿರುವುದು ಸಹ ರಸ್ತೆಗಳು ಹಾಳಾಗಲು ಕಾರಣವಾಗಿದೆ. ಬಹುತೇಕ ಪ್ರಮುಖ ರಸ್ತೆಗಳಲ್ಲಿ ಪೈಪ್, ಕೇಬಲ್ ಅಳವಡಿಕೆ ಸೇರಿ ಇತರ ಉದ್ದೇಶಗಳಿಗೆ ಅಗೆದು ಹಾಗೆಯೇ ಬಿಡಲಾಗಿದೆ. ಈ ರೀತಿ ರಸ್ತೆ ಅಗೆದವರ ವಿರುದ್ಧ ನಗರಸಭೆಯೂ ಕ್ರಮ ಕೈಗೊಳ್ಳುತ್ತಿಲ್ಲ.
ನಗರ ಪ್ರದಕ್ಷಿಣೆ ವೇಳೆ ರಸ್ತೆ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಈಗಾಗಲೇ 8 ಕಿ.ಮೀ. ರಸ್ತೆ ದುರಸ್ತಿ ಕಾಮಗಾರಿಗೆ ಅನುಮತಿ ದೊರೆತು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮುಂದಿನ ದಿನಗಳಲ್ಲಿ ರಸ್ತೆ ಸಮಸ್ಯೆಗೆ ಪರಿಹಾರ ಸಿಗಲಿದೆ. | ಬಿ.ನಂದಕುಮಾರ್ ಪೌರಾಯುಕ್ತ, ರಾಮನಗರ ನಗರಸಭೆ ರಸ್ತೆಗಳಲ್ಲಿ ಓಡಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಗುಂಡಿ ಬಿದ್ದ ರಸ್ತೆಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕಿದೆ. | ಸತೀಶ್ ವ್ಯಾಪಾರಿ, ಎಂ.ಎಚ್. ಕಾಲೇಜು ಸಮೀಪ, ರಾಮನಗರ