

ಬೆಂಗಳೂರು: ಇತ್ತೀಚಿಗಷ್ಟೇ ಸಿಲಿಕಾನ್ ಸಿಟಿಯಲ್ಲಿ ಬಿದ್ದ ಭಾರಿ ಮಳೆಯಿಂದ 3,453 ಮನೆಗಳಿಗೆ ಹಾನಿಯಾಗಿದೆ ಎಂದು ಪಾಲಿಕೆ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಬಿ.ಶರತ್ ಹೇಳಿದ್ದಾರೆ.
ಪೂರ್ವ 714, ದಕ್ಷಿಣ 652, ಆರ್.ಆರ್.ನಗರ 530, ಪಶ್ಚಿಮ 494, ಮಹದೇವಪುರ 461, ದಾಸರಹಳ್ಳಿ 247, ಯಲಹಂಕ 208 ಮತ್ತು ಬೊಮ್ಮನಹಳ್ಳಿ ವಲಯ 147 ಸೇರಿ ಒಟ್ಟು 3,453 ಮನೆಗಳಿಗೆ ಹಾನಿಯಾಗಿರುವುದು ಸರ್ವೇಯಲ್ಲಿ ದೃಢಪಟ್ಟಿದೆ. ಹಾಗಾಗಿ, ವಿವರಗಳಲ್ಲಿ ಸಂಗ್ರಹಿಸಿ ಪ್ರತಿ ಸಂತ್ರಸ್ತರಿಗೆ ತಲಾ 25 ಸಾವಿರ ರೂ.ಪರಿಹಾರ ನೀಡುವ ಕಾರ್ಯ ಈಗಾಗಲೇ ಶುರುವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾಹಿತಿ ನೀಡಿದರು.
ಕಡಿಮೆ ಅವಧಿಯಲ್ಲಿ ಬಿದ್ದಿರುವ ಭಾರಿ ಮಳೆಯಿಂದ ನಗರದಲ್ಲಿ ಸಮಸ್ಯೆ ಆಗುತ್ತಿರುವುದು ನಿಜ. ಸಿಲಿಕಾನ್ ಸಿಟಿಯಲ್ಲಿ 984 ಕಿ.ಮೀ.ರಾಜಕಾಲುವೆಗಳಿವೆ. ರಾಜಕಾಲುವೆಯಲ್ಲಿ ಹೂಳು ತೆಗೆಯಲು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಜಲಮಂಡಳಿಯವರು ರಾಜಕಾಲುವೆಯಲ್ಲಿ ಪೈಪ್ ಅಳವಡಿಕೆಗೆ ಕಾಮಗಾರಿ ಅಗೆದಿರುವ ಹಿನ್ನೆಲೆಯಲ್ಲಿ ಸಮಸ್ಯೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಹರಿಯುತ್ತಿರುವ ನೀರನ್ನು ಬೇರೆ ಕಡೆಗೆ ಹರಿಯುವಂತೆ ವ್ಯವಸ್ಥೆ ಮಾಡುತ್ತೇವೆ ಎಂದರು.
ಅರಣ್ಯ, ನೀರು ನುಗ್ಗಿರುವುದು, ವಿದ್ಯುತ್ ಮತ್ತು ಆಪ್ಟಿಕಲ್ ೈಬರ್ ಸೇರಿ ಇತರೆ ಸಮಸ್ಯೆಗಳ ಬಗ್ಗೆ ಒಟ್ಟು 106 ದೂರುಗಳು ಬಿಬಿಎಂಪಿ ವ್ಯಾಪ್ತಿಯ ಕಂಟ್ರೋಲ್ ಕೊಠಡಿಗೆ ಬಂದಿವೆ. ದಾಖಲಾದ ದೂರುಗಳು ಪೈಕಿ 96 ಬಾಕಿ ಉಳಿದಿವೆ. 12ರಿಂದ 14 ವರ್ಷದವರೆಗೆ, 15ರಿಂದ 17 ವರ್ಷದವರೆಗೆ ಹಾಗೂ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ವಾಕ್ಸಿನೇಷನ್ ನೀಡಲಾಗುತ್ತಿದೆ. 12ರಿಂದ 14 ವರ್ಷದವರೆಗೆ ಶೇ.64 ಮೊದಲನೇ ಡೋಸ್ ಪಡೆದಿದ್ದಾರೆ. ಇದರಲ್ಲಿ ಶೇ.16 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 15ರಿಂದ 17 ವರ್ಷವರೆದವರಿಗೆ ಶೇ.77 ಮೊದಲನೆ ಡೋಸ್ ನೀಡಲಾಗಿದೆ. ಇದರಲ್ಲಿ ಶೇ.64ಮಂದಿ 2ನೇ ಡೋಸ್ ಪಡೆದಿದ್ದಾರೆ. 18 ವರ್ಷ ಮೇಲ್ಪಟ್ಟನವರು ಶೇ.91 ಮೊದಲನೆ ಡೋಸ್ ಹಾಕಿಸಿಕೊಂಡಿದ್ದಾರೆ. ಇದರಲ್ಲಿ ಶೇ.95 ಮಂದಿ 2ನೇ ಡೋಸ್ ಪಡೆದಿದ್ದಾರೆ ಎಂದು ವಿಶೇಷ ಆಯುಕ್ತರು ಹೇಳಿದ್ದಾರೆ.