ಎಂಟು ಮಕ್ಕಳ ಕಣ್ಣಿಗೆ ಹಾನಿ

Eye Damage
Published on

ಬೆಂಗಳೂರು: ದೀಪಾವಳಿ ಹಬ್ಬ ಪ್ರಯುಕ್ತ ಸಂಭ್ರಮದಲ್ಲಿದ್ದ ನಗರದ ಎಂಟು ಮಕ್ಕಳು ಭಾನುವಾರ ಪಟಾಕಿಯಿಂದ ಸಂಭವಿಸಿದ ಅವಘಡಗಳಿಂದ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.

ಈ ಪೈಕಿ ಗಂಭೀರ ಗಾಯಗೊಂಡಿರುವ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಇಬ್ಬರು ಮಕ್ಕಳು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ಚಿಕ್ಕ ಪ್ರಮಾಣದ ಹಾನಿ ಮಾಡಿಕೊಂಡು ನಾರಾಯಣ ನೇತ್ರಾಲಯದಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು. ಭಾನುವಾರ ವರ್ತರಿನ

ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಮೂವರು, ನಾರಾಯಣ ನೇತ್ರಾಲಯದಲ್ಲಿ ಇಬ್ಬರು ಹಾಗೂ ಮಿಂಟೋ ಆಸ್ಪತ್ರೆಯಲ್ಲಿ ಮೂವರು ದಾಖಲಾಗಿದ್ದಾರೆ. ಈ ಮೂಲಕ ಪಟಾಕಿ ಅವಘಡ ಪ್ರಕರಣಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಸಣ್ಣ ಪ್ರಮಾಣದಲ್ಲಿ ಗಾಯಗೊಂಡ 8 ಮಕ್ಕಳು ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಉಳಿದಂತೆ ಇಬ್ಬರ ಕಣ್ಣಿಗೆ ಹೆಚ್ಚಿನ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಾಗಡಿ ರಸ್ತೆಯ 4 ವರ್ಷದ ಬಾಲಕ ಮತ್ತು ಹೆಗಡೆ ನಗರದ 12 ವರ್ಷದ ಬಾಲಕನ ಕಣ್ಣಿಗೆ ತೀವ್ರ ಗಾಯವಾಗಿದೆ. ಇಬ್ಬರ ಕಣ್ಣಿಗೂ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ಮಾಡಲು ಕರೊನಾ ಸೋಂಕು ಪರೀಕ್ಷೆ ಮಾಡಿಸುವುದು ಕಡ್ಡಾಯವಾದ ಹಿನ್ನೆಲೆಯಲ್ಲಿ, ಈ ಇಬ್ಬರು ಬಾಲಕರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಆರ್​ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಿಂಟೋ ವೈದ್ಯರು ತಿಳಿಸಿದ್ದಾರೆ.

ನೋಡುತ್ತ ನಿಂತಿದ್ದ ಮೂವರಿಗೆ ಗಾಯ

ಹುಬ್ಬಳ್ಳಿ: ನಗರದ ವಿವಿಧೆಡೆ ಪಟಾಕಿ ಹೊಡೆಯುವುದನ್ನು ನೋಡುತ್ತ ನಿಂತ ಮೂವರ ಕಣ್ಣಿಗೆ ಪೆಟ್ಟಾಗಿದೆ. ತಬೀಬ್​ಲ್ಯಾಂಡ್​ನ 28 ವಯಸ್ಸಿನ ವ್ಯಕ್ತಿ ಪಟಾಕಿ ಸಿಡಿಯುವುದನ್ನು ನೋಡುತ್ತ ನಿಂತಾಗ ಹಾರಿದ ಕಿಡಿ ಹಾರಿ ಬಲಗಣ್ಣಿಗೆ ಬಿದ್ದಿದೆ. ಎಸ್.ಎಂ. ಕೃಷ್ಣನಗರದ 31 ವರ್ಷದ ವ್ಯಕ್ತಿಗೂ ಎಡಗಣ್ಣಿಗೆ ಪೆಟ್ಟು ಬಿದ್ದಿದೆ. ಸಿಡಿದ ಪಟಾಕಿಯಲ್ಲಿನ ಕಲ್ಲಿನ ಪುಡಿ 3 ವರ್ಷದ ಬಾಲಕನ ಕಣ್ಣಲ್ಲಿ ಸೇರಿರುವ ಘಟನೆ ಕೇಶ್ವಾಪುರ ಮನೋಜ್ ಪಾರ್ಕ್​ನಲ್ಲಿ ಸಂಭವಿಸಿದೆ. ಈ ಮೂವರೂ ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ‘ಸರ್ಕಾರ ಪಟಾಕಿ ನಿರ್ಬಂಧಿಸಿ ಹಸಿರುಪಟಾಕಿಗೆ ನಿಶಾನೆ ತೋರಿಸಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net