

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಿವಿಧೆಡೆ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಗುರುವಾರ ಬೆಳಗಿನ ಜಾವ ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮಳೆ ಸುರಿದಿದೆ. ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸತತ ಎರಡು ತಾಸು ಜಿಟಿಜಿಟಿ ಮಳೆ ಸುರಿದಿದೆ.
ಹುಬ್ಬಳ್ಳಿ ಹೋಬಳಿಯಲ್ಲಿ ನಾಲ್ಕು ಎಂಎಂ, ಛಬ್ಬಿ ಹೋಬಳಿಯಲ್ಲಿ 4.5 ಎಂಎಂ ಮಳೆಯಾಗಿದೆ. ತಾಲೂಕಿನ ಇತರೆಡೆ ಕಡಿಮೆಯಾಗಿದೆ ಎಂದು ತಹಸೀಲ್ದಾರ್ ಪ್ರಕಾಶ ನಾಶಿ ತಿಳಿಸಿದ್ದಾರೆ.
ಅಕಾಲಿಕ ಮಳೆಯಿಂದ ಹತ್ತಿ, ಕಡಲೆ, ಜೋಳದ ಬೆಳೆಗಳಿಗೆ ತೊಂದರೆಯಾಗಿದೆ. ಇದೇ ರೀತಿ ಇನ್ನಷ್ಟು ದಿನ ಸುರಿದರೆ ಬಹುತೇಕ ಹಿಂಗಾರು ಬೆಳೆಗಳಿಗೆ ಹಾನಿಯಾಗಲಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.
ಸದ್ಯ ಬಿಡಿಸಲು ಅಣಿಯಾಗಿರುವ ಹತ್ತಿ ಬೆಳೆ ಕಪ್ಪಾಗಲಿದೆ. ಕೆಂಪು ಮೆಣಸಿನಕಾಯಿ ಫಸಲು ಕೂಡ ಹಾಳಾಗುವ ಸಾಧ್ಯತೆ ಇದೆ.
ಹಿಂಗಾರು ಜೋಳ ಸದ್ಯ ತೆನೆ ಬಿಡುವ ಸಮಯವಾಗಿದೆ. ಈ ಸಮಯದಲ್ಲಿ ಮಳೆ ಹೆಚ್ಚಾದರೆ ಜೋಳ ಕಾಡಿಗೆ ರೋಗಕ್ಕೆ ತುತ್ತಾಗುವ ಅಪಾಯ ಇದೆ. ಕಡಲೆ ಹುಳಿ ತೊಳೆದರೆ ಇಳುವರಿ ಕಡಿಮೆಯಾಗಲಿದೆ ಜೊತೆಗೆ ಕೀಟಭಾದೆ ಎದುರಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯದಿಂದ ಉಂಟಾದ ಸದ್ಯದ ಸ್ಥಿತಿಯಿಂದ ಕೃಷಿ ಬೆಳೆಗಳಿಗೆ ಕಂಟಕವಾಗಿದ್ದು, ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ.