ಬಾಳೆಹೊನ್ನೂರಿನ ಹಲವೆಡೆ ಮನೆಗಳಿಗೆ ಹಾನಿ

bhr rain
ಬಾಳೆಹೊನ್ನೂರಿನ ರೇಣುಕನಗರದ ಸುರೇಂದ್ರ ಕಿಣಿ ಅವರ ಮನೆಯ ಗೋಡೆ ಕುಸಿದಿರುವುದು.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಪುನರ್ವಸು ಮಳೆ ಅಬ್ಬರ ಬುಧವಾರ ಕೊಂಚ ಪ್ರಮಾಣದಲ್ಲಿ ತಗ್ಗಿತು. ಮಂಗಳವಾರ ಧಾರಾಕಾರ ಮಳೆಗೆ ರಂಭಾಪುರಿ ಮಠ ರಸ್ತೆಯ ರೇಣುಕನಗರದ ಸುರೇಂದ್ರ ಕಿಣಿ ಎಂಬುವರ ಮನೆಯ ಗೋಡೆ ಕುಸಿದಿದೆ. ಗೋಡೆ ಕುಸಿದ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಅನಾಹುತ ತಪ್ಪಿದೆ. ನಾಡಕಚೇರಿ ವಿಎ ಸಮೀಕ್ಷಾ, ಬಿ.ಕಣಬೂರು ಪಿಡಿಒ ಕಾಶಪ್ಪ ಸ್ಥಳ ಪರಿಶೀಲಿಸಿದರು.

ಆಡುವಳ್ಳಿ ಗ್ರಾಪಂ ಮೇಗರಮಕ್ಕಿ ಕಿಚ್ಚಬ್ಬಿ ಸುಭಾಷ್ ಎಂಬುವರ ಮನೆ ಸಮೀಪ ಧರೆ ಕುಸಿದಿದೆ. ಮನೆಗೂ ಹಾನಿಯಾಗುವ ಆತಂಕ ಎದುರಾಗಿದೆ. ಆಡುವಳ್ಳಿ ಪಿಡಿಒ, ಗ್ರಾಮಲೆಕ್ಕಿಗರು ಸ್ಥಳ ಪರಿಶೀಲಿಸಿದರು.
ಬುಧವಾರ ಬೆಳಗ್ಗೆಯಿಂದ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದು, ಭದ್ರಾ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದೆ. ಕೆಲವು ಗ್ರಾಮಗಳಲ್ಲಿ ಎರಡ್ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ನಿರಂತರ ಮಳೆಯಿಂದ ಪಟ್ಟಣದಲ್ಲಿ ಜನಸಂಚಾರ ಕಡಿಮೆಯಾಗಿದ್ದು, ವ್ಯಾಪಾರ ಕೂಡ ಕುಂಠಿತಗೊಂಡಿದೆ.
ಭದ್ರಾ ನದಿ, ಹಳ್ಳಕೊಳ್ಳಗಳ ಪ್ರವಾಹದಲ್ಲಿ ಮೀನುಗಳು ಬರುತ್ತಿರುವುದರಿಂದ ಜನ ಮೀನು ಶಿಕಾರಿಯಲ್ಲಿ ತೊಡಗಿದ್ದಾರೆ. ಸೀಕೆ ಸಮೀಪದ ಭದ್ರಾ ನದಿಯ ಪ್ರವಾಹದ ನೀರಿನಲ್ಲಿ ಸ್ಥಳೀಯ ಒ.ಡಿ.ಸ್ಟೀಫನ್ ಬುಧವಾರ ಬೀಸಿದ ಬಲೆಗೆ 16 ಕೆಜಿಯ ಗೌರಿ ಮೀನು ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net