

ಕೊಕ್ಕಡ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ವ್ಯಾಪ್ತಿಯಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿದೆ. ಪರಿಸರದ ಹಲವು ಮನೆಗಳ ಪಾಯ ಹಾಗೂ ತೋಟಕ್ಕೆ ದರೆ ಕುಸಿದಿದೆ.
ದಿಡುಪೆ ಪೈಚಾರು ರಾಜ್ಯ ಹೆದ್ದಾರಿ ರಸ್ತೆಯ ಶಾಂತಿಕಾಯ ಎಂಬಲ್ಲಿ ಗುಡ್ಡಜರಿದು ರಸ್ತೆಗೆ ಮಣ್ಣು ಬಿದ್ದಿದೆ. ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮುಂಭಾಗದಲ್ಲಿರುವ ಅಮ್ಮ ಶಬರಾಯ ಕುಟುಂಬಸ್ಥರ ದೈವ ದೇವರುಗಳಿರುವ ಮನೆಯ ಸಮೀಪಕ್ಕೆ ಗುಡ್ಡ ಕುಸಿದಿದೆ. ಎಲಿಕ್ಕಳ ಭುಜಂಗ ಶೆಟ್ಟಿ ಮನೆ ಸಮೀಪದ ಗುಡ್ಡಜರಿದು ಪಾಯದ ಬದಿಗೆ ಮಣ್ಣು ಬಿದ್ದಿದೆ. ಮನೆ ಸಮೀಪವಿರುವ ಗುಡ್ಡೆಜರಿದು ಮಿತ್ತಡ್ಕ ಪ್ರಶಾಂತ ಎಂಬುವರ ಮನೆ ಸಮೀಪದ ಕರೆಂಟ್ ಕಂಬ ಧರೆಗುರುಳಿದೆ. ಕೊಳಂಬೆ ಗಣೇಶ್ ಅವರ ಮನೆ ಸಮೀಪ ಗುಡ್ಡಜರಿದು ಮಣ್ಣು ಸಹಿತ ನೀರಿನ ಟ್ಯಾಂಕ್ ಕೆಳಗೆ ಬಿದ್ದಿದೆ.
ಟನಾ ಸ್ಥಳಕ್ಕೆ ಪಟ್ರಮೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮನೋಜ್ ಅಂಗರಗುಡ್ಡೆ, ಸದಸ್ಯ ರಾಜೇಶ್ ರೈ, ಪಿಡಿಒ ಅಮ್ಮಿ ಬಿ.ಪಿ., ಗ್ರಾಮ ಸಹಾಯಕ ಮೋಹನ್, ಸಿಬ್ಬಂದಿ ಪ್ರಸನ್ನ ಭೇಟಿ ನೀಡಿ ಪರಿಶೀಲಿಸಿದ್ದಾರೆ.